ಚಿಕ್ಕಬಳ್ಳಾಪುರ, ಫೆ. 25 (DaijiworldNews/HR): ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಪೋಟ ಸಂಭವಿಸಿ ಆರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಜೆಪಿ ಮುಖಂಡ ಹಾಗೂ ದಕ್ಷಿಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗುಡಿಬಂಡೆ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಅವರನ್ನು ಪ್ರಮುಖ ಆರೋಪಿ ನಾಗರಾಜ್, ಚಾಲಕ ರಿಯಾಜ್, ಮಧುಸೂದನ್ ರೆಡ್ಡಿ , ಪ್ರವೀಣ್, ವೆಂಕಟೇಶ ರೆಡ್ಡಿ, ರಾಘವೇಂದ್ರ ರೆಡ್ಡಿ, ಗಣೇಶ್ ಮತ್ತು ವೆಂಕಟಶಿವಾರೆಡ್ಡಿ ಎಂದು ಗುರುತಿಸಲಾಗಿದೆ.
ಇನ್ನು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಗುಡಿಬಂಡೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಗುಡಿಬಂಡೆ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ ರೆಡ್ಡಿ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.