ಬೆಂಗಳೂರು, ಫೆ.25 (DaijiworldNews/MB) : ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಎಂಬ ಖ್ಯಾತಿ ಗಳಿಸಿರುವ ಅಹ್ಮದಾಬಾದ್ನ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಮೊಟೇರಾ ಸ್ಟೇಡಿಯಂಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಮರುನಾಮಕರಣ ಮಾಡಲಾಗಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಟೀಕಿಸಿದೆ.
ಸ್ಟೇಡಿಯಂಗೆ "ಉಕ್ಕಿನ ಮನುಷ್ಯ" ಹೆಸರನ್ನೇ ಬದಲಿಸಿ "ತುಕ್ಕಿನ ಮನುಷ್ಯ" ತನ್ನ ಹೆಸರಿಟ್ಟಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದ್ದು ''ಮೋದಿಯವರು ತಾನು ಪಟೇಲರಿಗಿಂತ ಮಹಾನ್ ಎಂದುಕೊಂಡಿದ್ದಾರಾ'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಕೇಶುಭಾಯ್ ಪಟೇಲ್ರನ್ನು ಮುಗಿಸಿದ್ದಾಯ್ತು. ಅಡ್ವಾಣಿಯವರನ್ನ ಮೂಲೆಗೆ ಕೂರಿಸಿದ್ದಾಯಿತು. ವಾಜಪೇಯಿ ಅವರ ಫೋಟೋ ಕೂಡ ಇಡದೆ ಬದಿಗೆ ಸರಿಸಿದ್ದಾಯ್ತು. ಈಗ ಸ್ಟೇಡಿಯಂಗೆ "ಉಕ್ಕಿನ ಮನುಷ್ಯ" ಹೆಸರನ್ನೇ ಬದಲಿಸಿ "ತುಕ್ಕಿನ ಮನುಷ್ಯ" ತನ್ನ ಹೆಸರಿಟ್ಟಿದ್ದಾರೆ. ಬಿಜೆಪಿಗರೇ ತಾನು ಪಟೇಲರಿಗಿಂತ ಮಹಾನ್ ಎಂದುಕೊಂಡಿದ್ದಾರಾ ನರೇಂದ್ರ ಮೋದಿ'' ಎಂದು ಕೇಳಿದೆ.
ಅಹ್ಮದಾಬಾದ್ನ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಮೊಟೇರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಈ ಮರುನಾಮಕರಣ ಮಾಡಿದ ಸ್ಟೇಡಿಯಂ ಅನ್ನು ಭೂಮಿ ಪೂಜೆಯೊಂದಿಗೆ ಉದ್ಘಾಟನೆ ಮಾಡಿದ್ದಾರೆ.