ಚಿಕ್ಕಬಳ್ಳಾಪುರ, ಫೆ.25 (DaijiworldNews/MB) : ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಪೋಟ ಸಂಭವಿಸಿ ಆರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆ ಕ್ವಾರಿಯ ಮೂವರು ಮಾಲೀಕರನ್ನು ಬಂಧಿಸಿದ್ದು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸರ ಪ್ರಕಾರ, ರಾಘವೇಂದ್ರ ರೆಡ್ಡಿ, ವೆಂಕಟಶಿವ ರೆಡ್ಡಿ ಮತ್ತು ಮಧುಸೂಧನ್ ರೆಡ್ಡಿ ಈ ಕ್ವಾರಿಯ ಪಾಲುದಾರರು, ಪ್ರವೀಣ್ ಈ ಕಂಪನಿಯ ವ್ಯವಸ್ಥಾಪಕ, ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ಮೊಹಮ್ಮದ್ ರಿಯಾಜ್ ಅನ್ಸಾರಿ ಬಂಧಿತರು.
ಗುಡಿಬಂಡೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಎಂ.ಎನ್. ಮತ್ತು ಸಬ್ ಇನ್ಸ್ಪೆಕ್ಟರ್ ಜಿ.ಆರ್. ಗೋಪಾಲ್ ರೆಡ್ಡಿ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ತಿಳಿಸಿದ್ದಾರೆ.
ದೂರುಗಳು ಇದ್ದರೂ ಈ ಕಂಪನಿಯ ವಿರುದ್ದ ಕ್ರಮ ಕೈಗೊಳ್ಳದ ಹಿನ್ನೆಲೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಮದು ಅವರು ತಿಳಿಸಿದ್ದಾರೆ.
ಮಂಗಳವಾರ ಈ ಘಟನೆಯ ಬಳಿಕ, ಸ್ಥಳಕ್ಕೆ ತೆರಳೀ ಪರಿಶೀಲನೆ ನಡೆಸಿದ ಕರ್ನಾಟಕ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅಪರಾಧಿಗಳನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸುವಂತೆ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಂ.ಚಂದ್ರಶೇಖರ್ ಅವರಿಗೆ ಸೂಚಿಸಿದ್ದರು. ಅದರಂತೆ ಐಜಿಪಿ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ತಂಡಗಳನ್ನು ರಚಿಸಿದ್ದರು.
ಪೊಲೀಸರು ಸ್ಫೋಟಕ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ 14 ಜನರನ್ನು ಹೆಸರಿಸಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.