ಮೈಸೂರು, ಫೆ.25 (DaijiworldNews/MB) : ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಆದಿವಾಸಿಗಳಿಗೆ ಸವಲತ್ತು ನೀಡಬಾರದು ಎಂದು ಸಂಸದ ಪ್ರತಾಪಸಿಂಹ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ''ಆದಿವಾಸಿಗಳಿಗೆ ನೀಡುವ ಸವಲತ್ತು ನೀಡುವಾಗ ಕೊಂಚ ಎಚ್ಚರಿಕೆಯಿಂದ ಇರಬೇಕು. ಮೊದಲು ಕುತ್ತಿಗೆಗೆ ಶಿಲುಬೆ ಹಾಕಿಕೊಂಡು ಓಡಾಡುವವರನ್ನು ಗುರುತಿಸಬೇಕು. ಬಳಿಕ ಅವರಿಗೆ ಸೌಲಭ್ಯ ವಿತರಣೆ ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು'' ಎಂದು ಹೇಳಿದ್ದಾರೆ.
''ಎಲ್ಲಾ ಆದಿವಾಸಿ ಜನರಿಗೆ ಸರ್ಕಾರದ ಸವಲತ್ತು ಲಭಿಸುತ್ತಿದ್ದರೆ ಅವರು ಏಕೆ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದರು? ಎಲ್ಲವನ್ನೂ ಯೇಸುಸ್ವಾಮಿ ನೀಡಿದ ಎಂದು ಹೇಳುತ್ತಿದ್ದರು?'' ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ವರ್ಣೀಯರ ಬೀದಿಗಳ ಕಡೆಗೂ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು.
''ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ವಾಸವಿರುವ ಕಾಲೊನಿಗಳಲ್ಲಿ ನರೇಗಾ ಸೇರಿದಂತೆ ಇತರ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಸವರ್ಣೀಯರು ಇರುವ ಕಾಲೊನಿಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ'' ಎಂದರು.