ಲಕ್ನೋ, ಫೆ.24 (DaijiworldNews/PY): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮರ್ಥ ಸಂಸದ" ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನ್ ವ್ಯಂಗ್ಯವಾಡಿದ್ದಾರೆ.
ಕೇರಳ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಸ್ಮೃತಿ, "ರಾಹುಲ್ ಗಾಂಧಿ ಉತ್ತರಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕೇರಳದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ರಾಹುಲ್ ಗಾಂಧಿ ಧರಿಸಿದ್ದ ನಾಟಕದ ಮುಖವಾಡ ಈಗ ಕಳಚಿ ಬಿದ್ದಿವೆ. ಈಗ ಕಾಂಗ್ರೆಸ್ಸಿಗರ ಅಸಲಿ ಬಣ್ಣ ಬಯಲಾಗಿದೆ" ಎಂದಿದ್ದಾರೆ.
"ಅವರಿಗೆ ಅಮೇಥಿಯ ಜನರು ಎಲ್ಲಾ ರೀತಿಯಾದ ಅವಕಾಶ ನೀಡಿದ್ದರೂ ಸಹ ಅವರು ಮಾತ್ರ ಅಮೇಥಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಕೇರಳಕ್ಕೆ ಓಡಿ ಹೋದರು. ಅಮೇಥಿ ಜಜನೆ ಹಲವಾರು ವರ್ಷಗಳಿಂದ ಅಸಮರ್ಥ ಸಂಸದನನ್ನು ಸಹಿಸಿಕೊಂಡಿದ್ದರು. ಆದರೆ, ಈಗ ರಾಹುಲ್ ಗಾಂಧಿ ಉತ್ತರ ಭಾರತದಲ್ಲಿ ಗೆಲ್ಲಲು ವಿಫಲವಾದ ನಂತರ ಅಮೇಥಿ ಜನತೆಗೆ ರಾಹುಲ್ ಅವಮಾನ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದವರಿಗೆ ಇಷ್ಟು ವರ್ಷ ಅಮೇಥಿಯ ಜನತೆ ಮತ ನೀಡಿ ಗೆಲ್ಲಿಸಿದ್ದಾರೆ. ಆ ಕಾರಣದಿಂದ ಅಮೇಥಿಯ ಬಗ್ಗೆ ಮಾತನಾಡಿದ್ದಲ್ಲಿ ರಾಹುಲ್ ಗಾಂಧಿ ಕುಟುಂಬದವರು ಸಹಿಸುವುದಿಲ್ಲ. ಆದರೂ ಕೂಡಾ ಪ್ರಿಯಾಂಕ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ರಾಹುಲ್ ಹೇಳಿಕೆಯ ಬಗ್ಗೆ ಏಕೆ ಮೌನವಹಿಸಿದ್ದಾರೆ?" ಎಂದು ಕೇಳಿದ್ದಾರೆ.
ಫೆ.23ರ ಮಂಗಳವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ್ದ ರಾಹುಲ್ ಗಾಂಧಿ ಅವರು, "ಉತ್ತರ ಭಾರತದಲ್ಲಿ ನಾನು 15 ವರ್ಷ ಸಂಸದನಾಗಿ ಬೇರೆ ರೀತಿಯ ರಾಜಕೀಯಕ್ಕೆ ಒಗ್ಗೂಡಿಕೊಂಡಿದ್ದೆ. ಆದರೆ, ಕೇರಳ ರಾಜಕೀಯ ನನ್ನ ಉತ್ಸಾಹವನ್ನು ಹೆಚ್ಚಿಸಿದೆ" ಎಂದಿದ್ದರು.