ಬೆಂಗಳೂರು, ಫೆ.24 (DaijiworldNews/MB) : ಕೃಷಿ ಕಾನೂನು ವಾಪಾಸ್ ಪಡೆಯುವವರೆಗೂ ಆಮರಣಾಂತ ಉಪವಾಸ ಮಾಡುತ್ತೇನೆ ಎಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸಂಬಂಧಿ ಅಭಯ್ ಸಂಧು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಕಾಲೆಳೆದಿರುವ ಕಾಂಗ್ರೆಸ್, ''ಭಗತ್ ಸಿಂಗ್ ಕುಟುಂಬವನ್ನೂ ದೇಶದ್ರೋಹಿಗಳು ಎನ್ನುವಿರಾ?'' ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ರೈತರು ಪ್ರತಿಭಟಿಸುತ್ತಾ 100 ದಿನಗಳಾಯಿತು, ಹುತಾತ್ಮರ ಸಂಖ್ಯೆ 200 ದಾಟಿತು. ದಿನೇ ದಿನೇ ದೇಶಾದ್ಯಂತ ರೈತರ ಪ್ರತಿಭಟನೆ ತೀವ್ರವಾಗಿ ಹಬ್ಬುತ್ತಿದೆ. ಆಂದೋಲನ ಜೀವಿ ಭಗತ್ ಸಿಂಗ್ ಕುಟುಂಬಸ್ಥರು ಜೊತೆಗೂಡಿದ್ದಾರೆ. ಪ್ರತಿಭಟಿಸುವವರನ್ನ ದೇಶದ್ರೋಹಿಗಳು ಎನ್ನುತ್ತಿದ್ದ ಬಿಜೆಪಿ ಭಗತ್ ಸಿಂಗ್ ಕುಟುಂಬವನ್ನೂ ದೇಶದ್ರೋಹಿಗಳು ಎನ್ನುವಿರಾ?'' ಎಂದು ಕೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನವೆಂಬರ್ ೨೬ ರಿಂದ ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ನಡೆದ ಹಲವು ಹಂತದ ಮಾತುಕತೆ ವಿಫಲವಾಗಿದೆ. ರೈತರ ಈ ಪ್ರತಿಭಟನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ದೊರೆತಿದೆ. ಈಗ ಸ್ವಾತಂತ್ಯ್ರ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್ ಸಂಬಂಧಿಯಾದ ಅಭಯ್ ಸಂಧು ಅವರು ಕೂಡಾ ಬೆಂಬಲಿಸಿದ್ದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಆಯೋಜನೆಗೊಂಡಿದ್ದ ಪ್ರತಿಭಟನೆಯಲ್ಲಿ ಸಂಧು ಅವರು ಕೂಡಾ ಭಾಗಿಯಾಗಿದ್ದಾರೆ.
ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ದಿನವಾದ ಮಾ.23 ರವರೆಗೂ ಗಡು ನೀಡಿರುವ ಸಂಧು ಒಂದು ವೇಳೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಆಮರಣಾಂತ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.