ಮೈಸೂರು, ಫೆ.24 (DaijiworldNews/PY): "ಮೈಸೂರು ಭಾಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹುಲಿಯಂತೆ ಅಬ್ಬರಿಸುತ್ತಿದ್ದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಇಂದು ಬೋನಿನಲ್ಲಿ ಕೂಡಿಹಾಕಿದ್ದಾರೆ" ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಕೊನೆ ಕ್ಷಣದಲ್ಲಿ ತನ್ನ ಅಭ್ಯರ್ಥಿ ಶಾಂಕತಕುಮಾರಿ ಅವರಿಗೆ ಮತ ಹಾಕದೇ ವಂಚಿಸಿದೆ. ಹಿರಿಯರಾದ ಶಾಂತಕುಮಾರಿ ಅವರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಇಂದಿನ ಘಟನೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪತನವಾಗುವು ಮುನ್ಸೂಚನೆ" ಎಂದಿದ್ದಾರೆ.
"ನಾವು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಹಕಾರ ಕೇಳಿದ್ದೇವೆ. ಆದರೆ, ಸಮಗೆ ಸಹಕಾರ ಸಿಕ್ಕಿಲ್ಲ. ಈ ಕಾರಣದಿಂದ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಾವು ಚುನಾವಣೆಯಲ್ಲಿ ಗೆಲ್ಲಲು ಕೂಡಾ ಪ್ರಯತ್ನಿಸಿದ್ದು, ನಮ್ಮ ಮತಗಳು ನಮ್ಮಲ್ಲೇ ಇವೆ. ಆದರೆ, ಸಂಖ್ಯೆಯ ದೃಷ್ಟಿಯಲ್ಲಿ ಫಲ ನೀಡಿಲ್ಲ. ಹೀಗೆ ಆಗಿದೆ ಎಂದು ನಮಗೆ ಬೇಸರವಿಲ್ಲ" ಎಂದು ತಿಳಿಸಿದ್ದಾರೆ.