ಮುಂಬೈ, ಫೆ.24 (DaijiworldNews/PY): ಸುಮಾರು ಎರಡು ವರ್ಷಗಳ ಹಿಂದೆ ಆಕಸ್ಮಿಕವಾಗಿ ನುಂಗಿದ 3 ಸೆಂ.ಮೀ ಉದ್ದದ ಮೊನಚಾದ ಲೋಹದ ಪಿನ್ ಅನ್ನು ಖಾಸಗಿ ಆಸ್ಪತ್ರೆಯ ವೈದ್ಯರು ಹೊರಗೆದಿದ್ದು, 10 ವರ್ಷದ ಬಾಲಕಿಗೆ ಪುನರ್ಜನ್ಮ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಬಾಲಕಿ ಮಲಗಿದ್ದ ವೇಳೆ ಆಕೆಗೆ ಕೆಮ್ಮು ಬರಲು ಪ್ರಾರಂಭವಾಗಿದ್ದು, ಈ ವೇಳೆ ಆಕೆಯ ಪೋಷಕರಿಗೆ ಕೊರೊನಾದ ಭಯ ಶುರುವಾಯಿತು. ಕೂಡಲೇ ಬಾಲಕಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಯಲ್ಲಿ ಎಕ್ಸ್-ರೇ ಮಾಡಿದ ಸಂದರ್ಭ ಶ್ವಾಸನಾಳದಲ್ಲಿ ಪಿನ್ ಕಾಣಿಸಿದೆ.
"ಬಾಲಕಿಯ ಶ್ವಾಸನಾಳದಿಂದ ಪಿನ್ ಅನ್ನು ತೆಗೆಯಲು ಸಿಟಿ-ಸ್ಕ್ಯಾನ್ ಮಾಡಲಾಗಿದೆ" ಎಂದು ಇಎನ್ಟಿ ಸರ್ಜನ್ ಡಾ. ಕ್ಷಿತಿಜ್ ಶಾ ಹೇಳಿದ್ದಾರೆ.
ಡಾ. ಕ್ಷಿತಿಜ್ ಶಾ, ಡಾ.ಶಲಾಕಾ ಡಿಗೆ , ಡಾ. ಸಾಗರ್ ವಾರಂಕರ್, ಡಾ. ಪ್ರಮೋದ್ ಕೇಲ್ ಹಾಗೂ ಇತರ ವೈದ್ಯರು ಮೊದಲು ಬ್ರಾಂಕೋಸ್ಕೋಪಿಯಿಂದ ಬಾಲಕಿಯ ಶ್ವಾಸನಾಳದಲ್ಲಿದ್ದ ಪಿನ್ ಅನ್ನು ತೆಗೆಯಲು ಯತ್ನಿಸಿದರು. ಬಳಿಕ ಕಠಿಣ ಬ್ರಾಂಕೋಸ್ಕೋಪಿ ಮಾಡಿ ಪಿನ್ ಅನ್ನು ತೆಗೆಯಲು ನಿರ್ಧರಿಸಿದರು.
"ಬಾಲಕಿಯ ಶ್ವಾಸನಾಳದಿಂದ ಪಿನ್ ಅನ್ನು ಯಾವುದೇ ತೊಂದರೆಗಳಿಲ್ಲದೆ ತೆಗೆಯಲಾಯಿತು. ಇದಾದ ಬಳಿಕ ಬಾಲಕಿ ಬೇಗನೇ ಚೇತರಿಸಿಕೊಂಡಿದ್ದು, ಎರಡು ದಿನಗಳ ನಂತರ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು" ಎಂದು ಡಾ. ಕ್ಷಿತಿಜ್ ಶಾ ಹೇಳಿದ್ದಾರೆ.
"ಎರಡು ವರ್ಷಗಳ ಹಿಂದೆ ನನ್ನ ಮಗಳು ಆಕಸ್ಮಿಕವಾಗಿ ಪಿನ್ ಅನ್ನು ನುಂಗಿದ್ದಳು.ಎಕ್ಸ್-ರೇ ಮಾಡಿಸಿದ್ದ ಸಂದರ್ಭ ಆಕೆಯ ಶ್ವಾಸನಾಳದಲ್ಲಿ ಪಿನ್ ಇರುವುದು ತಿಳಿದುಬಂದಿದೆ" ಎಂದು ಬಾಲಕಿಯ ತಂದೆ ಸಂಜೀವ್ ಶಾ ತಿಳಿಸಿದ್ದಾರೆ.
"ಬಾಲಕಿ ಪಿನ್ ನುಂಗಿರುವ ವಿಚಾರವನ್ನು ಎಲ್ಲರೂ ಮರೆತಿದ್ದರು. ಒಂದೂವರೆ ವರ್ಷಗಳ ನಂತರ ಆಕೆಗೆ ಯಾವುದೇ ತೊಂದರೆ ಇರಲಿಲ್ಲ. ಇದಾದ ಬಳಿಕ ಆಕೆ ಮಲಗಿದ್ದ ಸಂದರ್ಭ ಜೋರಾಗಿ ಕೆಮ್ಮುತ್ತಿದ್ದಳು. ಹಾಗಾಗಿ ನಮಗೆ ಕೊರೊನಾ ಇರಬಹುದೇ ಎನ್ನುವ ಅನುಮಾನವಾಯಿತು. ಈ ಬಗ್ಗೆ ನಮಗೆ ತುಂಬಾ ಚಿಂತೆಯಾಗಿತ್ತು. ಬಳಿಕ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಕ್ಸ್-ರೇ ಸಹಾಯದಿಂದ ಸುಮಾರು ಎರಡು ವರ್ಷಗಳ ಕಾಲ ಅವಳ ಶ್ವಾಸನಾಳದಲ್ಲಿರುವ ಪಿನ್ ಅನ್ನು ಪತ್ತೆಮಾಡಲಾಯಿತು" ಎಂದು ಸಂಜೀವ್ ಶಾ ಹೇಳಿದ್ದಾರೆ.
"ಬಾಲಕಿ ಚಿಕಿತ್ಸೆಗೆ ಸ್ಪಂದಿಸಿದ್ದು, ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ"ಎಂದು ಡಾ.ಶಾ. ತಿಳಿಸಿದ್ದಾರೆ.
ತಮ್ಮ ಮಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಿದ್ದಕ್ಕಾಗಿ ಪೋಷಕರು ವೈದ್ಯರಿಗೆ ಕೃತಜ್ಞತೆ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಮ್ಮ ಮಕ್ಕಳನ್ನು ಪಿನ್, ನಾಣ್ಯ ಹಾಗೂ ಇತರೆ ಸಣ್ಣ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳಲು ಪೋಷಕರು ಮನವಿ ಮಾಡಿಕೊಂಡಿದ್ದಾರೆ.