ಮೈಸೂರು, ಫೆ.24 (DaijiworldNews/PY): "ಕಾಂಗ್ರೆಸ್ನೊಂದಿಗಿನ ಜೆಡಿಎಸ್ ಮೈತ್ರಿ ಮುರಿದು ಬೀಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕಾರಣ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಜೆಡಿಎಸ್ ಅನ್ನು ಪದೇ ಪದೇ ಕೆಣಕುವಂತ ಹೇಳಿಕೆಗಳನ್ನು ನೀಡಿದ್ದಾರೆ. ಈಗ ಜೆಡಿಎಸ್ ಪಕ್ಷ ಎಲ್ಲಿದೆ?. ಜೆಡಿಎಸ್ ಒಂದು ಪಕ್ಷವೇ ಅಲ್ಲ ಎಂದು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶಿಸುವ ನಿಟ್ಟಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇವೆ. ಸಿದ್ದರಾಮಯ್ಯ ಅವರಿಗೆ ಈ ಮುಖೇನ ಮನವರಿಕೆ ಮಾಡಿಕೊಡಬೇಕಿದೆ" ಎಂದಿದ್ದಾರೆ.
"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಲು ಸಿದ್ದರಾಮಯ್ಯ ಅವರು ಬಿಡುತ್ತಿಲ್ಲ. ನನ್ನ ಜೊತೆ ಮಾತನಾಡದಂತೆ ಒತ್ತಡ ಹೇರುತ್ತಿದ್ದಾರೆ. ನಾನವು ಸವಾಲು ಹಾಕಲು ಬಂದಿಲ್ಲ. ಅಲ್ಲದೇ, ಕಿಂಗ್ ಮೇಕರ್ ಆಗಲು ಬಯಸುತ್ತಿಲ್ಲ. 2023ರ ಚುನಾವಣೆಯ ಮೇಲೆ ನಮ್ಮ ಗುರಿ" ಎಂದು ಹೇಳಿದ್ದಾರೆ.
"ನಾವು ಬಿಜೆಪಿಯಿಂದಲೂ ಕೂಡಾ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಬಿಜೆಪಿ ರಾಜ್ಯವನ್ನು ಲಘುವಾಗಿ ಪರಿಗಣಿಸುತ್ತಿದೆ. ಅಧಿಕಾರ ಸಿಗದಿದ್ದರೂ ತೊಂದರೆ ಇಲ್ಲ. ಆದರೆ, ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ" ಎಂದಿದ್ದಾರೆ.