ಬೆಂಗಳೂರು, ಫೆ.24 (DaijiworldNews/MB) : ''ಕರ್ನಾಟಕ ಮತ್ತು ಕೇರಳ ನಡುವಿನ ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ. ಕೊರೊನಾ ನೆಗಟಿವ್ ವರದಿ ಮಾತ್ರ ಕಡ್ಡಾಯ'' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
''ಕರ್ನಾಟಕ ಮತ್ತು ಕೇರಳ ನಡುವೆ ಅಂತರರಾಜ್ಯ ಪ್ರಯಾಣವನ್ನು ನಿಷೇಧ ಮಾಡಲಾಗಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್ ಟಿ-ಪಿಸಿರ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಮಾರ್ಗಸೂಚಿ ಜಾರಿ ಮಾಡಲಾಗಿದೆ'' ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು ವಯನಾಡ್ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಗಡಿಯಲ್ಲಿನ ನಿರ್ಬಂಧ ತೆರವುಗೊಳಿಸಿ ಎಂದು ಮನವಿ ಮಾಡಿರುವ ಅವರು, ಎರಡು ರಾಜ್ಯಗಳ ನಡುವೆ ಸರಕು ಸಾಗಾಟಕ್ಕೆ ತೊಂದರೆ ಉಂಟಾಗುತ್ತದೆ ಎಂದೂ ಹೇಳಿದ್ದಾರೆ. ತರಕಾರಿಗಳಿಗೆ ಉತ್ತರ ಕೇರಳವು ಕರ್ನಾಟಕವನ್ನು ಅವಲಂಬಿಸಿದೆ. ಕರ್ನಾಟಕದ ಗಡಿ ಪ್ರದೇಶಗಳಿಂದ ಕೃಷಿ ಕಾರ್ಮಿಕರು ನಿಯಮಿತವಾಗಿ ವಯನಾಡದಲ್ಲಿರುವ ಕೇರಳದ ತೋಟಗಳಿಗೆ ಬರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಕಾಸರಗೋಡು ಗಡಿಯಲ್ಲಿ ಆಂಬುಲೆನ್ಸ್ಗಳನ್ನು ಕೂಡಾ ತಡೆಯಲಾಗುತ್ತಿದೆ ಎಂದು ಕಾಸಗರೋಡಿನ ಖಾಸಗಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಮನೋಜ್ ನಾಯರ್ ಮಾಧ್ಯಮವೊಂದಕ್ಕೆ ತಿಳಿಸಿದ್ದು, ಆದರೆ ನಾವು ಯಾವುದೇ ವಾಹನ ತಡೆದಿಲ್ಲ, ಕೊರೊನಾ ನೆಗೆಟಿವ್ ವರದಿ ಪರಿಶೀಲಿಸಿದ್ದೇವೆ ಅಷ್ಟೇ ಎನ್ನುತ್ತಾರೆ ಅಧಿಕಾರಿಗಳು.