ಕೋಲ್ಕತ್ತ, ಫೆ.24 (DaijiworldNews/MB) : ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ನಾರಾಯಣಗಡ ಪೊಲೀಸ್ ಠಾಣೆ ವ್ಯಾಪ್ತಿಯ ಅಭಿರಾಮ್ಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಾಂಬ್ ದಾಳಿ ನಡೆದಿದ್ದು, ಈ ಸಂದರ್ಭ ಆಡಳಿತಾರೂಢ ಟಿಎಂಸಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಬೈಕ್ನಲ್ಲಿ ಬಂದ ಮೂವರು ಆಕ್ರಮಣಕಾರರು ಶೌಭಿಕ್ ದೊಲುಯಿ ಹಾಗೂ ಇತರ ಇಬ್ಬರು ಕಾರ್ಯಕರ್ತರ ಮೇಲೆ ಬಾಂಬ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಆಕ್ರಮಣಕಾರಿಗಳು ಬಾಂಬ್ ಎಸೆದು ಪರಾರಿಯಾಗುವ ಮುನ್ನ ದೊಲುಯಿ ಮೇಲೆ ಗಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಮೂವರನ್ನು ಕೂಡಾ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಪೈಕಿ ದೊಲುಯಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಉಳಿದಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇದಿನಿಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಈ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸ್ಥಳೀಯ ಟಿಎಂಸಿ ನಾಯಕರು ಆರೋಪಿಸಿದ್ದು, ಇದನ್ನು ಅಲ್ಲಗಳೆದಿರುವ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಸಮಿತ್ ದಾಸ್ ಈ ದಾಳಿಗೆ ಟಿಎಂಸಿಯ ಒಳ ಜಗಳವೇ ಕಾರಣ ಎಂದು ಹೇಳಿದ್ದಾರೆ.