ತಿರುವನಂತಪುರಂ, ಫೆ. 23 (DaijiworldNews/SM): ಕೇರಳದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಗಡಿಗಳನ್ನು ಬಂದ್ ಮಾಡಲು ಆದೇಶ ನೀಡಿದ್ದು, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ನಡುವೆ ಕೇರಳ ಗಡಿ ನಿರ್ಬಂಧ ತೆರವುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಕೇರಳ ಸರಕಾರ ಮನವಿ ಮಾಡಿದೆ. ಗಡಿ ಖ್ಯಾತೆಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವಂತೆ ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಕೇರಳ ಸಿಎಂ, ಅಂತರಾಜ್ಯ ಗಡಿ ಬಂದ್ ಮಾಡುವುದು ಮತ್ತು ನಿರ್ಬಂಧ ವಿಧಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಂತರಾಜ್ಯ ಪ್ರಯಾಣಕ್ಕೆ ಯಾವುದೇ ರಾಜ್ಯ ನಿರ್ಬಂಧ ಹೇರುವಂತಿಲ್ಲ ಎಂದು ಹೇಳಿದ್ದಾರೆ.
ಇನ್ನು ನೆರೆಯ ರಾಜ್ಯವನ್ನು ಹೆಚ್ಚಾಗಿ ಗಡಿ ಪ್ರದೇಶದ ಜನರು ಅವಲಂಬಿಸಿದ್ದಾರೆ. ಹಾಗಿರುವ ಸಂದರ್ಭದಲ್ಲಿ ನಿರ್ಬಂಧ ವಿಧಿಸಿರುವುದರಿಂದ ಗಡಿ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು. ಯಾವುದೇ ರಾಜ್ಯಗಳು ಅಂತರರಾಜ್ಯ ಪ್ರಯಾಣವನ್ನು ತಡೆಯಬಾರದು ಎಂಬ ಕೇಂದ್ರ ಸರ್ಕಾರದ ಸೂಚನೆಗೆ ವಿರುದ್ಧವಾಗಿ ಈ ನಿರ್ಬಂಧಗಳಿವೆ ಎಂದು ಪಿಣರಾಯಿ ದೂರಿದ್ದಾರೆ.