ತಿರುವನಂತಪುರ:, ಫೆ.23 (DaijiworldNews/PY): "ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸ್ನೇಹಿತರಾಗಿದ್ದು, ಕೇರಳದಲ್ಲಿ ಪರಸ್ಪರ ಸ್ವರ್ಧಿಸುತ್ತಿವೆ" ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
"ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಹಾಗೂ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಸ್ಪರ್ಧಿಸುತ್ತಿವೆ. ಕೇರಳದಲ್ಲಿ ಕುಸ್ತಿ, ದೆಹಲಿಯಲ್ಲಿ ದೋಸ್ತಿ. ದೆಹಲಿಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಕೂಡಾ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ಗೆ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಾಗಿದೆ" ಎಂದಿದ್ದಾರೆ.
"ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಎಡಪಂಥೀಯರ ಕಪಟತೆ. ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಅವರು ಸ್ನೇಹಿತರಾಗಿದ್ದಾರೆ. ಇದನ್ನೇ ನಾನು ರಾಹುಲ್ ಗಾಂಧಿ ಅವರಿಗೆ ಕೇಳಲು ಇಚ್ಛಿಸುತ್ತೇನೆ. ಪ್ರಜಾಪ್ರಭುತ್ವ ಅಥವಾ ಕಪಟತೆಯ ಮೇಲೆ ನೀವು ನಂಬಿಕೆ ಇರಿಸುತ್ತೀರಾ?" ಎಂದು ಕೇಳಿದ್ದಾರೆ.
"ಕಾಂಗ್ರೆಸ್ ಹಲವಾರು ರಾಜ್ಯಗಳಲ್ಲಿ ವಿಭಿನ್ನ ಮೈತ್ರಿಯನ್ನು ಹೊಂದಿದ್ದು, ಈ ವಿಚಾರದ ಬಗ್ಗೆ ರಾಹುಲ್ ಗಾಂಧಿ ತಮ್ಮ ನಿಲುವನ್ನು ತಿಳಿಸಬೇಕು" ಎಂದಿದ್ದಾರೆ.
"ರಾಹುಲ್ ಗಾಂಧಿ ಅವರು ಟ್ರ್ಯಾಕ್ಟರ್ ಚಾಲನೆ ಮಾಡಿ ನಟನಾಗಲು ಇಚ್ಛಿಸುತ್ತಿದ್ದಾರೆ. ನೀವು ಎಪಿಎಂಸಿಯನ್ನು ಬೆಂಬಲಿಸುವುದೇ ಆದಲ್ಲಿ ಕೇರಳದಲ್ಲಿ ಏಕೆ ಜಾರಿ ಮಾಡಿಲ್ಲ?" ಎಂದು ಕೇಳಿದರು.