ನವದೆಹಲಿ, ಫೆ.23 (DaijiworldNews/PY): ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಇತರರನ್ನು ಭ್ರಷ್ಟಾಚಾರ ಪ್ರಕರಣವೊಂದರಿಂದ ಮುಕ್ತಗೊಳಿಸುವುದರ ವಿರುದ್ದ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ನ್ಯಾಯಮೂರ್ತಿ ಯು.ಯು.ಲಿಲಿತ್ ನೇತೃತ್ವದ ಪೀಠ ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ್ದು, ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಮುಂದೂಡಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಿಬಿಐ ಪರ ವಾದ ಮಂಡಿಸಿದ್ದು, "ಮತ್ತೊಂದು ಪ್ರಕರಣದಲ್ಲಿ ನಾನು ಇನ್ನೊಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಈ ನಿಟ್ಟಿನಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು" ಎಂದು ಪೀಠಕ್ಕೆ ಮನವಿ ಮಾಡಿದರು.
ಪೀಠ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರ ಮನವಿಯನ್ನು ಪುರಸ್ಕರಿಸಿದ್ದು, ಎಪ್ರಿಲ್ 6ಕ್ಕೆ ವಿಚಾರಣೆಯನ್ನು ಮುಂದೂಡಿತು.
1996ರಲ್ಲಿ ಇಂಧನ ಸಚಿವರಾಗಿದ್ದ ಪಿಣರಾಯಿ ವಿಜಯನ್ ಅವರು, ಕೆನಡಾ ಮೂಲದ ಎಸ್ಎನ್ಸಿ-ಲಾವಲಿನ್ ಕಂಪೆನಿಗೆ ಕಾಮಗಾರಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ 374.50 ಕೋಟಿ. ರೂ. ನಷ್ಟ ಮಾಡಿದ್ದು ಹಾಗೂ ಗುತ್ತಿಗೆ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.