ಚೆನ್ನೈ, ಫೆ.23 (DaijiworldNews/PY): ಆನೆಯೊಂದನ್ನು ಮರಕ್ಕೆ ಕಟ್ಟಿಹಾಕಿ ಇಬ್ಬರು ಮಾವುತರು ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋವನ್ನು ಶುಭಂ ಜೈನ್ ಎನ್ನುವವರು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದು, ಟ್ವೀಟ್ನಲ್ಲಿರುವಂತೆ ಈ ಘಟನೆ ತಮಿಳುನಾಡಿನ ತೆಕ್ಕಂಪಟ್ಟಿಯ ಆನೆ ಶಿಬಿರದಲ್ಲಿ ನಡೆದಿದೆ ಎನ್ನಲಾಗಿದೆ.
ಇಬ್ಬರು ಮಾವುತರು ಆನೆಯನ್ನು ಮರಕ್ಕೆ ಕಟ್ಟಿ ಹಾಕಿದ್ದು, ಎರಡು ದೊಣ್ಣೆಗಳಿಂದ ನಿರಂತರವಾಗಿ ಥಳಿಸಿದ್ದಾರೆ. ಥಳಿತದಿಂದ ಆನೆ ನೋವಿನಿಂದ ಜೋರಾಗಿ ಕೂಗುತ್ತಿತ್ತು. ಶೀಘ್ರವೇ ಈ ಅಮಾನವೀಯ ಮಾವುತರನ್ನು ಬಂಧಿಸಿ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.