ಚಿಕ್ಕಬಳ್ಳಾಪುರ, ಫೆ.23 (DaijiworldNews/MB) : ''ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಹಿರೇನಾಗವಲ್ಲಿಯಲ್ಲಿ ಆರು ಕಾರ್ಮಿಕರ ಸಾವಿಗೆ ಕಾರಣವಾದ ಜಿಲೆಟಿನ್ ಸ್ಪೋಟ ಪ್ರಕರಣವನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ. ಸರ್ಕಾರದಿಂದ ಮೃತರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುವುದು'' ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಸವರಾಜ ಬೊಮ್ಮಾಯಿ ಅವರು, ''ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು ಯಾವುದೇ ಪಕ್ಷಪಾತ ಮಾಡದೆ ಸಿಐಡಿಗೆ ಈ ಪ್ರಕರಣ ವಹಿಸಲು ನಿರ್ಧರಿಸಿದ್ದೇವೆ. ವರದಿ ಲಭಿಸಿ 24 ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಕೂಡಾ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ'' ಎಂದು ಹೇಳಿದರು.
''ಮೊದಲು ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತಿತ್ತು. ಆದರೆ ಈ ಘಟನೆಯ ಬಳಿಗೆ ಪ್ರತಿ ತಿಂಗಳು ಕ್ರಷರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಕೂಡಾ ಹೇಳಿದರು.