ನವದೆಹಲಿ, ಫೆ.23 (DaijiworldNews/MB) : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶ್ರೀಲಂಕಾಕ್ಕೆ ತೆರಳಲು ಭಾರತದ ವಾಯುಪ್ರದೇಶವನ್ನು ಬಳಕೆ ಮಾಡುವುದಕ್ಕೆ ಭಾರತ ಸರ್ಕಾರ ಅಸ್ತು ಎಂದಿದೆ. ಇಮ್ರಾನ್ ಖಾನ್ ಶ್ರೀಲಂಕಾಗೆ ಫೆ.23 ರಂದು ತೆರಳುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತದ ವಾಯು ಪ್ರದೇಶ ಬಳಕೆ ಮಾಡಬೇಕಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2019 ರಲ್ಲಿ ಅಮೇರಿಕಾ ಹಾಗೂ ಸೌದಿ ಅರೇಬಿಯಾಗೆ ತೆರಳಿದ ಸಂದರ್ಭ ಭಾರತದ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನ ಸರ್ಕಾರವು ನಿರಾಕರಿಸಿದ್ದು ಇದಕ್ಕೆ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಾರಣವಾಗಿ ನೀಡಿತ್ತು. ವಿವಿಐಪಿ ಏರ್ ಕ್ರಾಫ್ಟ್ಗಳು ತಮ್ಮ ದೇಶದ ವಾಯುಗಡಿ ಮೂಲಕ ಹಾದು ಹೋಗಲು ಸಾಮಾನ್ಯವಾಗಿ ಎಲ್ಲಾ ದೇಶಗಳು ಅನುಮತಿ ನೀಡುತ್ತದೆ ಆದರೆ ಪಾಕಿಸ್ತಾನದ ಈ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಒಂದು ಭಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಿಮಾನಯಾಣಕ್ಕೂ ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು.
ಇನ್ನು, ಈ ವಾಯುಮಾರ್ಗ ಬಳಕೆ ಕುರಿತಾಗಿ ಇಸ್ಲಾಮಾಬಾದ್ನಿಂದ ಹತ್ತು ದಿನಗಳ ಹಿಂದೆ ನವದೆಹಲಿಗೆ ಅನುಮತಿ ಕೋರಿ ಪತ್ರವನ್ನು ಕಳುಹಿಸಲಾಗಿತ್ತು ಎಂದು ಸಂಸ್ಥೆಯೊಂದು ವರದಿ ಮಾಡಿದೆ. ಸೋಮವಾರ ಫೆ.22 ರಂದು ಭಾರತ ಸರ್ಕಾರ ಈ ಕೋರಿಕೆಗೆ ಅನುಮತಿ ನೀಡಿದೆ.