ನವದೆಹಲಿ, ಫೆ.23 (DaijiworldNews/PY): ಜ.26ರ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ರೈತ ನಾಯಕ ಸೇರಿ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ಜಮ್ಮು ನಗರದ ಛಾಠಾ ಪ್ರದೇಶದ ನಿವಾಸಿ ಜಮ್ಮು-ಕಾಶ್ಮೀರ ಸಂಯುಕ್ತ ಕಿಸಾನ್ ರಂಗದ ಅಧ್ಯಕ್ಷ ಮೊಹಿಂದರ್ ಸಿಂಗ್ (45) ಹಾಗೂ ಜಮ್ಮುವಿನ ಗೋಲೆ ಗುರ್ಜಾಲ್ ನಿವಾಸಿ ಮನ್ದೀಪ್ ಸಿಂಗ್ (23) ಎಂದು ಗುರುತಿಸಲಾಗಿದೆ.
"ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ಇವರಿಬ್ಬರು ಪ್ರಮುಖ ಸಂಚುಕೋರರಾಗಿದ್ದಾರೆ" ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇಬ್ಬರು ಆರೋಪಿಗಳನ್ನು ಸೋಮವಾರ ರಾತ್ರಿ ಜಮ್ಮು-ಕಾಶ್ಮೀರ ಪೊಲೀಸರ ನೆರವಿನೊಂದಿಗೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ದೆಹಲಿಗೆ ಸ್ಥಳಾಂತರಿಸಲಾಗಿದೆ.
"ಮೊಹಿಂದರ್ ಸಿಂಗ್ ನಿರಾಪರಾಧಿಯಾಗಿದ್ದು, ಅವರು ತಪ್ಪು ಮಾಡಿಲ್ಲ. ಅವರನ್ನು ಬಿಡುಗಡೆ ಮಾಡಿ ಎಂದಿ ಮೊಹಿಂದರ್ ಸಿಂಗ್ ಕುಟುಂಬದವರು ಒತ್ತಾಯಿಸಿದ್ದು, ಅವರು ಹಿಂಸಾಚಾರ ನಡೆದ ಸಂದರ್ಭ ಕೆಂಪುಕೋಟೆಯಲ್ಲಿ ಇರಲಿಲ್ಲ, ದೆಹಲಿ ಗಡಿಯಲ್ಲಿ ಇದ್ದರು" ಎಂದಿದ್ದಾರೆ.