ಬೆಂಗಳೂರು, ಫೆ.23 (DaijiworldNews/PY): "ಕಾವೇರಿ ನದಿಯ ನೀರನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ತಮಿಳುನಾಡಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
"ತಮಿಳುನಾಡು ಸರ್ಕಾರ, ವೈಗೈ, ಗುಂಡರ್ ಹಾಗೂ ಕಾವೇರಿ ನದಿಗಳನ್ನು ಜೋಡಿಸುವ 14,400 ಕೋಟಿ. ರೂ.ವೆಚ್ಚದ ಮಹತ್ವಾಕಾಂಕ್ಷೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರವಿವಾರ ಭೂಮಿಪೂಜೆ ನೆರವೇರಿಸಿದ್ದು, ಇದಾದ ಬಳಿಕ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ಭುಗಿಲೆದ್ದಿದೆ. ತಮಿಳುನಾಡು ಕೈಗೆತ್ತಿಕೊಂಡಿರುವ ಯೋಜನೆಯ ವಿರುದ್ದ ಕೇಂದ್ರ ಮುಂದೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ" ಎಂದು ತಿಳಿಸಿದ್ದಾರೆ.
"ತಮಿಳುನಾಡು ಸರ್ಕಾರ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರ ಉಭಯ ರಾಜ್ಯಗಳು ನ್ಯಾಯಾಲಯದ ತೀರ್ಪಿನಂತೆ ನಡೆದುಕೊಳ್ಳಬೇಕು ಎಂದು ತಮಿಳುನಾಡಿಗೆ" ಬಿಎಸ್ವೈ ಸಲಹೆ ನೀಡಿದ್ದಾರೆ.
"ದೆಹಲಿಯಲ್ಲಿ ಅಂತರ್ರಾಜ್ಯ ಜಲ ವಿವಾದದ ಬಗ್ಗೆ ರಾಜ್ಯದ ಕಾನೂನು ತಂಡದೊಂದಿಗೆ ನಡೆದ ಸಭೆ ಮುಗಿದ ಬಳಿಕ ತಮಿಳುನಾಡು ಕೈಗೆತ್ತಿಕೊಂಡಿರುವ ಯೋಜನೆಯ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕೇಂದ್ರಕ್ಕೆ ತಿಳಿಸಲಿದ್ದಾರೆ" ಎಂದು ಹೇಳಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಭೇಟಿಯಾಗಿದ್ದು, "ರಾಜ್ಯ ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅವರ ಅಭಿಪ್ರಾಯ ಪಡೆಯಲು ನಾವು ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯುತ್ತೇವೆ. ತಮಿಳುನಾಡು ಕೈಗೆತ್ತಿಕೊಂಡ ಯೋಜನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ವಿರೋಧ ವ್ಯಕ್ತಪಡಿಸಿವೆ. ಈ ಯೋಜನೆ ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಮಿಳುನಾಡು ಸಿಎಂ ಆ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ" ಎಂದಿದ್ದಾರೆ.
"ವೈಗೈ, ವೆಲ್ಲಾರು, ಗುಂಡಾರು ಜೋಡಣೆ ಯೋಜನೆ ಯೋಜನೆ ತಮಿಳುನಾಡು ಕೈಗೆತ್ತಿಕೊಂಡಿರುವುದು ಹಾಗೂ ಆ ಯೋಜನೆಗೆ ಕೇಂದ್ರ ಸರ್ಕಾರವೇ ಆರ್ಥಿಕ ನೆರವು ನೀಡುತ್ತಿರುವುದು ನಮ್ಮ ಸರ್ಕಾರಕ್ಕೆ ಗೊತ್ತಾಗದಿರುವುದು ಅಚ್ಚರಿ. ಅವರಿಗೆ ಒಂದು ಹನಿ ಹೆಚ್ಚುವರಿ ನೀರು ನೀಡಲು ನಾವು ಅವಕಾಶ ನೀಡುವುದಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.