ಬೆಂಗಳೂರು, ಫೆ.23 (DaijiworldNews/MB) : ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿನ್ ದುರಂತದಲ್ಲಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು ಈ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ''ಕರ್ನಾಟಕದ ಚಿಕ್ಕಾಬಳ್ಳಾಪುರದಲ್ಲಿ ಅಪಘಾತದಿಂದ ಪ್ರಾಣಹಾನಿಯಾಗಿರುವ ಸುದ್ದಿ ತಿಳಿದು ನೋವುಂಟಾಗಿದೆ. ದುಃಖಿತ ಕುಟುಂಬಗಳಿಗೆ ಸಂತಾಪ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ತಿಳಿಸಿದ್ದಾರೆ.