ಬೆಂಗಳೂರು, ಫೆ.23 (DaijiworldNews/MB) : ಚಿಕ್ಕಬಳ್ಳಾಪುರ ಜಿಲೇಟಿನ್ ಸ್ಫೋಟ ಪ್ರಕರಣದ ತನಿಖೆ ನಡೆಸಬೇಕು ಹಾಗೂ ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ಮಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ.
ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ''ಅಮಾಯಕ ಕಾರ್ಮಿಕರ ದುರ್ಮರಣಕ್ಕೆ ಕಾರಣವಾದ ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಪೋಟ ಆಘಾತಕಾರಿ ದುರ್ಘಟನೆ. ಮೃತರ ಆತ್ಮಕ್ಕೆ ಶಾಂತಿ ಕೋರುವೆ'' ಎಂದು ಹೇಳಿದ್ದು, ''ಪ್ರಕರಣದ ತನಿಖೆ ನಡೆಸುವುದರ ಜೊತೆಗೆ ನೊಂದ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕೆಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುವೆ'' ಎಂದಿದ್ದಾರೆ.
''ಶಿವಮೊಗ್ಗದ ಜಿಲೆಟಿನ್ ಸ್ಪೋಟದ ತಿಂಗಳ ಅವಧಿಯಲ್ಲಿ ನಡೆದ ಚಿಕ್ಕಬಳ್ಳಾಪುರ ಸ್ಪೋಟ ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಬೇಜವಾಬ್ದಾರಿತನ ಮತ್ತು ಅಕ್ರಮದಲ್ಲಿ ಷಾಮೀಲಾಗಿರುವ ಭ್ರಷ್ಟತನಕ್ಕೆ ಸಾಕ್ಷಿ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ನೀವು ಯಾರನ್ನು ರಕ್ಷಿಸುತ್ತಿದ್ದೀರಿ? ಜನರನ್ನೇ? ಭ್ರಷ್ಟರನ್ನೇ?'' ಎಂದು ಪ್ರಶ್ನಿಸಿದ್ದಾರೆ.
''ಚಿಕ್ಕಬಳ್ಳಾಪುರ ಕಲ್ಲು ಕ್ವಾರಿಯಲ್ಲಿ ಆರುಮಂದಿ ಸಾವಿಗೀಡಾಗಿರುವುದು ಜಿಲೆಟಿನ್ ಸ್ಪೋಟದಿಂದ ಅಲ್ಲ. ಈ ಅಮಾಯಕ ಕಾರ್ಮಿಕರು, ಅಕ್ರಮ ಗಣಿಗಳನ್ನು ಸಕ್ರಮ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿಎಸ್ವೈ ಅವರ ದುರಾಡಳಿತಕ್ಕೆ ಬಲಿಯಾಗಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಸಿಎಂ ಅವರು ತಕ್ಷಣ ಆದೇಶಿಸಬೇಕು. ಇದಕ್ಕಿಂತ ಮೊದಲು ಈ ಘಟನೆಗೆ ಕಾರಣರಾದ ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಅಮಾನತ್ನಲ್ಲಿಟ್ಟು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ರಾಜ್ಯದಲ್ಲಿಅಕ್ರಮ ಕಲ್ಲು ಗಣಿಗಾರಿಕೆಗೂ ಆಂಧ್ರಪ್ರದೇಶದ ಗಣಿಲೂಟಿಕೋರರಿಗೂ ನೇರವಾದ ಸಂಬಂಧ ಇದೆ. ವಿಧಾನಸೌಧದಿಂದ ಜಿಲ್ಲಾಮಟ್ಟದ ವರೆಗೆ ಎಲ್ಲರೂ ಇದರಲ್ಲಿ ಷಾಮೀಲಾಗಿದ್ದಾರೆ. ಚಿಕ್ಕಬಳ್ಳಾಪುರದ ಈ ಅಕ್ರಮ ಗಣಿಗಾರಿಕೆ, ಉಸ್ತುವಾರಿ ಸಚಿವ ಸುಧಾಕರ್ ಅವರ ಗಮನಕ್ಕೆ ಬಂದಿರಲಿಲ್ಲವೇ?'' ಎಂದು ಕೇಳಿದ್ದಾರೆ.
''ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಅನಧಿಕೃತ ಕ್ರಷರ್, ಕ್ವಾರಿಗಳಿವೆ ಎಂದು ಹೇಳಲಾಗುತ್ತಿದೆ. ಇವುಗಳ ಪಟ್ಟಿಯನ್ನು ಮುಖ್ಯಮಂತ್ರಿ ಅವರು ತಕ್ಷಣ ಬಿಡುಗಡೆಗೊಳಿಸ ಬೇಕು ಮತ್ತು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚುವ ಕೆಲಸ ಶುರು ಮಾಡಬೇಕು'' ಎಂದು ಒತ್ತಾಯಿಸಿದ್ದಾರೆ.