ಕೋಲ್ಕತ್ತ, ಫೆ.23 (DaijiworldNews/PY): ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರಿಗೆ ಕೋಲ್ಕತ್ತ ಪೊಲೀಸರು ಸಮನ್ಸ್ ನೀಡಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಅವರಿಂದ ಕೊಕೆನ್ ವಶಪಡಿಸಿಕೊಂಡಿರುವ ಪ್ರಕರಣ ಇದಾಗಿದೆ.
ಕಳೆದ ವಾರ ಪಮೇಲಾ ಗೋಸ್ವಾಮಿ ಹಾಗೂ ಅವರ ಸ್ನೇಹಿತನನ್ನು ಕೊಕೆನ್ ಸಹಿತ ಬಂಧಿಸಲಾಗಿತ್ತು. ರಾಕೇಶ್ ಸಿಂಗ್ ಅವರು ತಮ್ಮ ವಿರುದ್ದ ಸಂಚು ರೂಪಿಸಿದ್ದಾರೆ ಎಂದು ಪಮೇಲಾ ಗೋಸ್ವಾಮಿ ಅವರು ಆರೋಪಿಸಿದ್ದರು.
"ಫೆ.23ರಂದು ರಾಕೇಶ್ ಸಿಂಗ್ ಅವರನ್ನು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ" ಎಂದು ಐಪಿಎಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ಪಮೇಲಾ ಗೋಸ್ವಾಮಿ ಅವರು ತಮ್ಮ ವಿರುದ್ದ ಆರೋಪ ಮಾಡಿದ ಬೆನ್ನಲ್ಲೇ ರಾಕೇಶ್ ಸಿಂಗ್ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, "ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡಲು ಸಿದ್ದ" ಎಂದು ತಿಳಿಸಿದ್ದರು.
90 ಗ್ರಾಂ ಕೊಕೆನ್ ಹೊಂದಿದ್ದ ಕಾರಣ ಪಮೇಲಾ ಗೋಸ್ವಾಮಿ ಹಾಗೂ ಅವರ ಸ್ನೇಹಿತ ಪ್ರದೀಪ್ ಕುಮಾರ್ ದೇ ಅವರನ್ನು ಫೆ.17ರಂದು ಬಂಧಿಸಲಾಗಿತ್ತು.
"ಇದಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದ್ಯೊಗಿ ಹಾಗೂ ಕೈಲಾಶ್ ವರ್ಗೀಯಾ ಅವರ ಸಹಾಯಕ ರಾಕೇಶ್ ಸಿಂಗ್ ಅವರ ಷಡ್ಯಂತ್ರವಿದೆ. ಹಾಗಾಗಿ ಸಿಂಗ್ ಅವರನ್ನು ಬಂಧಿಸಬೇಕು. ಸಿಐಡಿಗೆ ಈ ಪ್ರಕರಣವನ್ನು ವಹಿಸಬೇಕು" ಎಂದು ಸಿಟಿ ಕೋರ್ಟ್ನಿಂದ ಪೊಲೀಸರು ಕರೆದೊಯ್ಯುವ ದಂದರ್ಭ ಸುದ್ದಿಗಾರರಿಗೆ ಗೋಸ್ವಾಮಿ ತಿಳಿಸಿದ್ದರು.