ಚಿಕ್ಕಬಳ್ಳಾಪುರ, ಫೆ.23 (DaijiworldNews/PY): "ಅಕ್ರಮವಾಗಿ ಕ್ವಾರಿಯಲ್ಲಿ ತೊಡಗಿಸಿಕೊಂಡವರ ವಿರುದ್ದ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಆರೋಗ್ಯ ಹಾಗೂ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಪೋಟದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ದುರುಂತ ನಿಜಕ್ಕೂ ಆತಂಕ ಮೂಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಯ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ಅನಧಿಕೃತವಾಗಿ ಕ್ರಷರ್ ನಡೆಸಬಾರದು ಎಂದು ಸೂಚಿಸಿದ್ದೆ. ಅಲ್ಲದೇ, ಈ ವಿಚಾರವಾಗಿ ಹಲವಾರು ಬಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆ" ಎಂದರು.
"ಅಕ್ರಮ ಕ್ರಷರ್ಗಳ ಮೇಲೆ ಇತ್ತೀಚೆಗೆ ಜಿಲ್ಲಾಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ನಂತರ ಸ್ಪೋಟಕಗಳನ್ನು ಕ್ರಷರ್ ಮಾಲೀಕರು ಕಾಡಿನಲ್ಲಿ ಬಚ್ಚಿಟ್ಟಿದ್ದರು. ಐವರು ಟಾಟಾ ಏಸ್ನಲ್ಲಿ ಹಾಗೂ ಇಬ್ಬರು ಬೈಕ್ನಲ್ಲಿ ಬಂದಿದ್ದು, ಗುಡಿಬಂಡೆ ತಾಲೂಕಿನ ವರ್ಲಕೊಂಡ ಅರಣ್ಯ ಪ್ರದೇಶದ ಸಮೀಪ ಕಾಡಿನಲ್ಲಿ ತಂದು ಸ್ಪೋಟಕಗಳನ್ನು ಬಿಸಾಡಿ ಹೋಗಲು ಬಂದಿರಬಹುದು" ಎಂದು ಅನುಮಾನ ವ್ಯಕ್ತಪಡಿಸಿದರು.
"ಹಿರೇನಾಗವೇಲಿ ಗ್ರಾಮದ ಒಬ್ಬರು ಸೇರಿದಂತೆ ಆಂಧ್ರಪ್ರದೇಶದ ಮೂವರು, ನೇಪಾಳದ ಒಬ್ಬರು ಹಾಗೂ ಬಾಗೇಪಲ್ಲಿಯ ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ" ಎಂದರು.
"ನಾನು ರಾತ್ರಿಯಿಂದ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಂಡಿದ್ದೇನೆ. ಸದ್ಯ ಘಟನಾ ಸ್ಥಳಕ್ಕೆ ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ" ಎಂದು ತಿಳಿಸಿದರು.
"ಜಿಲ್ಲಾಡಳಿತದ ಕಠಿಣ ಕ್ರಮಕ್ಕೆ ಹೆದರಿ ಈ ರೀತಿ ಮಾಡಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ರೀತಿಯಾದ ಘಟನೆ ಸಂಭವಿಸಿದ ರೀತಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸುತ್ತೇನೆ" ಎಂದು ಹೇಳಿದರು.
"ಇದು ಅಕ್ರಮವಾಗಿ ನಡೆಯುತ್ತಿರುವ ಕ್ರಷರ್ ಅಲ್ಲ. ಪರವಾನಗಿ ಪಡೆದು ನಡೆಸುತ್ತಿರುವ ಕ್ರಷರ್. ನಿಯಮ ಉಲ್ಲಂಘನೆ ಮಾಡಿ ಸ್ಪೋಟಕಗಳನ್ನು ಉಪಯೋಗಿಸಲಾಗಿದೆ. ಈ ಕಾರಣದಿಂದ ಫೆ.7ರಂದು ನಿಯಮ ಪಾಲಿಸದ ಕಾರಣ ಕ್ರಷರ್ ಕಾರ್ಯ ನಿರ್ವಹಿಸದಂತೆ ಬಂದ್ ಮಾಡಲಾಗಿತ್ತು" ಎಂದರು.
ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಘಟನೆಯಲ್ಲಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿದ್ದು ಗಂಭೀರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.