ನವದೆಹಲಿ, ಫೆ.23 (DaijiworldNews/MB) : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಸೋಮವಾರ ತಮ್ಮ ನಿವಾಸದಿಂದ ಕಚೇರಿಗೆ ಬೈಸಿಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟಿಸಿದರು.
ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ ಅವರು, ''ನೀವು ಏಸಿ ಕಾರಿನಿಂದ ಹೊರಗೆ ಬಂದು ಜನರ ಕಷ್ಟಗಳನ್ನು ಗಮನಿಸಿ, ಆಗ ನಿಮಗೆ ಇಂಧನ ಬೆಲೆ ಕಡಿಮೆ ಮಾಡುವ ಮನಸಾದರೂ ಬಂದೀತು. ಎಷ್ಟು ವಾಹನದಟ್ಟಣೆ ಇದ್ದರೂ ಸೋಮವಾರ ಬೆಳಿಗ್ಗೆ ಮನೆಯಿಂದ ಕಚೇರಿಗೆ ಬೈಸಿಕಲ್ನಲ್ಲಿ ಸವಾರಿ ನಡೆಸಿದೆ. ಜನರು ಈ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಕೂಡಲೇ ಸರ್ಕಾರ ಇಂಧನ ದರ ಕಡಿಮೆ ಮಾಡಬೇಕು'' ಎಂದು ಆಗ್ರಹಿಸಿದ್ದಾರೆ.
ಇನ್ನು, ''ತೈಲ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದಿರುವ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ ರಾಬರ್ಟ್, ಮಾಡುವುದೆಲ್ಲವನ್ನೂ ನೀವು ಮಾಡಿ ಈಗ ಬೇರೆಯವರ ಮೇಲೆ ಗೂಬೆ ಕೂರಿಸುತ್ತೀರಿ'' ಎಂದು ದೂರಿದ್ದಾರೆ.
ಇನ್ನು ಸೂಟ್ ಧರಿಸಿ ರಾಬರ್ಟ್ ವಾದ್ರಾ ಸೈಕಲ್ ಸವಾರಿ ಮಾಡುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಬಿಜೆಪಿ ಮುಖಂಡರು ಇವರನ್ನು ಟ್ರೋಲ್ ಮಾಡಿದ್ದಾರೆ.