ಹಾಸನ, ಫೆ. 22 (DaijiworldNews/SM): ಯುವಕನೊಬ್ಬ ತನ್ನ ಪ್ರಾಣವನ್ನು ಪಣದಲ್ಲಿಟ್ಟುಕೊಂಡು ತಾಯಿಯ ಪ್ರಾಣ ಉಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಅರಸೀಕೆರೆಯ ಬೈರಗೊಂಡನಹಳ್ಳಿಯ ಬೋವಿ ಕಾಲೋನಿಯ ತಮ್ಮ ಜಮೀನಿಗೆ ಚಂದ್ರಮ್ಮ ಹಾಗೂ ಕಿರಣ್ ಎಂಬವರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಇವರ ಮೇಲೆ ಏಕಾಏಕಿ ಚಿರತೆಯೊಂದು ಎರಗಿದೆ. ಈ ವೇಳೆ ಮಗ ಕಿರಣ್ ತಕ್ಷಣ ಕಾರ್ಯಪ್ರವೃತನಾಗಿದ್ದು, ತಕ್ಷಣ ಚಿರತೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾನೆ. ಸುಮಾರು ೧೫ ನಿಮಿಷಗಳ ಕಾಲ ಚಿರತೆಯೊಂದಿಗೆ ಸೆಣೆಸಾಟ ನಡೆದಿದೆ. ಅಂತಿಮವಾಗಿ ಚಿರತೆ ಸೋತಿದ್ದು, ಸ್ಥಳದಿಂದ ಕಾಲ್ಕಿತ್ತಿದೆ. ಇದರಿಂದಾಗಿ ತಾಯಿ ಮಗನ ಪ್ರಾಣ ಉಳಿದಿದೆ.
ಇನ್ನು ಚಿರತೆ ದಾಳಿಯಿಂದ ಗಾಯಗೊಂಡಿರುವ ಕಿರಣ್ ಹಾಗೂ ಚಂದ್ರಮ್ಮರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನರ ಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಆತಂಕದಲ್ಲಿದ್ದಾರೆ.