ನವದೆಹಲಿ, ಫೆ.22 (DaijiworldNews/HR): ಟೂಲ್ ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ನ್ಯಾಯಾಲಯ ಸೋಮವಾರ ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ದಿಶಾ ರವಿ ವಿಚಾರಣೆಯನ್ನು ಸಹ-ಆರೋಪಿಗಳೊಂದಿಗೆ ನಡೆಸುವ ಅಗತ್ಯವಿದ್ದು, ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮಾಡಿದ್ದ ಮನವಿಯನ್ನು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ವಿಚಾರಣೆಗೆ ಅನುಮತಿ ನೀಡಿದ್ದಾರೆ.
ಇಂದಿಗೆ ದಿಶಾ ರವಿ ಅವರ ಮೂರು ದಿನಗಳ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಿದ್ದು, ಆಕೆಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು, ವಿಚಾರಣೆ ನಡೆಸಿದ ಕೋರ್ಟ್ ಒಂದು ದಿನ ಪೊಲೀಸ್ ವಶಕ್ಕೆ ನೀಡಿದೆ.
ಇನ್ನು ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ 'ಟೂಲ್ಕಿಟ್' ಅನ್ನು ಸಿದ್ಧಪಡಿಸಿ, ಅದನ್ನು ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ ಆರೋಪದ ಮೇಲೆ ದಿಶಾ ರವಿ ಅವರನ್ನು ಫೆಬ್ರವರಿ 13ರಂದು ಬಂಧಿಸಿ,ಆರಂಭದಲ್ಲಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.