ಬೆಂಗಳೂರು, ಫೆ.22 (DaijiworldNews/HR): "ಮದುವೆ ಸಮಾರಂಭಗಳಲ್ಲಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮದುವೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾರ್ಷಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದರು.
"500 ಕ್ಕಿಂತ ಹೆಚ್ಚು ಜನರಿರಬಾರದು, ಎಲ್ಲರೂ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸಲು ಈ ಕ್ರಮ ವಹಿಸಲಾಗುವುದು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದ್ದು, ಕೊರೊನಾ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೇ ಕೊರೊನಾ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದಿದ್ದಾರೆ.
ಇನ್ನು "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ಲಸಿಕೆ ಅಭಿಯಾನ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ವಾರದೊಳಗೆ ಈ ಕುರಿತು ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಲಿದ್ದಾರೆ" ಎಂದು ಹೇಳಿದರು.