ವಯನಾಡ್, ಫೆ.22 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ಕೇರಳದ ವಯನಾಡ್ನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ಬಳಿಕ ಮಾತನಾಡಿದ ಅವರು, "ಕೃಷಿ ಮಾತ್ರವೇ ಭಾರತ ಮಾತೆಗೆ ಸಂಬಂಧಿಸಿದ ಏಕೈಕ ಉದ್ಯಮ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನರು ಒತ್ತಡ ಹೇರಬೇಕು" ಎಂದರು.
"ನಮ್ಮ ದೇಶದ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಇಡೀ ಜಗತ್ತು ನೋಡುತ್ತಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಮಾತ್ರ ರೈತರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ.
ಇನ್ನು "ಭಾರತ ದೇಶದ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಲು ಹಾಗೂ ಇಡೀ ಕೃಷಿ ಉದ್ಯಮವನ್ನು ಪ್ರಧಾನಿ ನರೇಂದ್ರ ಮೋದಿಯವರ ಇಬ್ಬರಿಂದ ಮೂವರು ಸ್ನೇಹಿತರಿಗೆ ನೀಡಲು ಹೊಸ ಮೂರು ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ" ಎಂದು ಆರೋಪಿಸಿದ್ದಾರೆ.