ಬೆಂಗಳೂರು, ಫೆ.22 (DaijiworldNews/MB) : ಇತರ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ತನ್ನ ಹಿಂದಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 14 ದಿನಗಳ ಹೋಂ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಮೂಲ ಹಂತದಲ್ಲಿ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ವಿಮಾನವೇರಲು ಅವಕಾಶವಿಲ್ಲದಿದ್ದರೂ, ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಅವರನ್ನು ಮತ್ತೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಯು.ಕೆ., ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸುವವರು ತಮ್ಮಗೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅವಕಾಶವಿಲ್ಲ. ಆದರೆ ಇತೆ ದೇಶಗಳಿಂದ ಬಂದ ಪ್ರಯಾಣಿಕರು ಆರ್ಟಿ-ಪಿಸಿಆರ್ ಪರೀಕ್ಷೆಗೆ ತಮ್ಮ ಮಾದರಿಗಳನ್ನು ನೀಡಿ ವಿಮಾನ ನಿಲ್ದಾಣದಿಂದ ನಿರ್ಗಮಿಸಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಶನಿವಾರ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿದೆ.
ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ತಮ್ಮ ಸರಿಯಾದ ವಸತಿ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಪರೀಕ್ಷಾ ಫಲಿತಾಂಶಗಳನ್ನು ಅವರಿಗೆ ತಲುಪಿಸಲಾಗುತ್ತದೆ. ಆರ್ಟಿ-ಪಿಸಿಆರ್ ಜೊತೆಗೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ಆರ್ಟಿ-ಪಿಸಿಆರ್ ಪರೀಕ್ಷೆಯ ಆಯ್ಕೆಯೂ ಲಭ್ಯವಿದೆ. ಪರೀಕ್ಷೆಗಳ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕಾಗುತ್ತದೆ. ಪಾಸಿಟಿವ್ ಆದಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು ಎಂದು ಸುತ್ತೋಲೆಗಳು ತಿಳಿಸಿವೆ.
ಇದಲ್ಲದೆ, ಅವರು ಯು.ಕೆ., ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ನಿರ್ಗಮಿಸುವ ಮೊದಲು 72 ಗಂಟೆಗಳ ಒಳಗೆ ಮಾಡಿದ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಪ್ರಯಾಣಿಕರು ಹೊಂದಿರಬೇಕು. ಅವರು ಕಡ್ಡಾಯವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಮತ್ತು ವರದಿ ನೆಗೆಟಿವ್ ಆಗಿದ್ದರೆ ಅವರಿಗೆ ಕ್ವಾರಂಟೈನ್ನಲ್ಲಿ ವಿನಾಯಿತಿ ಇರುತ್ತದೆ. ಅವರು ಏಳು ದಿನಕ್ಕಿಂತ ಅಧಿಕ ಕಾಲ ಇಲ್ಲಿ ನೆಲೆಸುವುದಾದರೆ ಏಳನೇ ದಿನದಂದು ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು.
ಕೊರೊನಾ ಪಾಸಿಟಿವ್ ಆದರೆ ಮಾರ್ಗಸೂಚಿಯನ್ನು ಪಾಲಿಸಬೇಕು. ಅಲ್ಪಾವಧಿಯ ಪ್ರಯಾಣಿಕರು ತಮ್ಮ ಭೇಟಿಯ ಸಮಯದಲ್ಲಿ ಯಾವುದೇ ಕೊರೊನಾ ರೋಗಲಕ್ಷಣಗಳನ್ನು ಕಂಡರೆ ಕಡ್ಡಾಯವಾಗಿ ವೈದ್ಯಕೀಯ ಸಮಾಲೋಚನೆ ಪಡೆದು ಪರೀಕ್ಷೆಗೆ ಒಳಗಾಗಬೇಕು ಎಂದು ಸುತ್ತೋಲೆಯಲ್ಲಿದೆ.