ಶಿವಮೊಗ್ಗ, ಫೆ.22 (DaijiworldNews/HR): "ಕರ್ನಾಟಕದಲ್ಲಿ ಯಾವುದೇ ಜಾತಿಯ ಜನರು ಮಿಸಲಾತಿ ಕೇಳಿದರೂ ಅಂಬೇಡ್ಕರ್ರವರ ಆಶಯದಂತೆ ಅರ್ಹತೆಯೇ ಮಾನದಂಡವಾಗಲಿದ್ದು, ಕಾಲಮಿತಿಯ ಒಳಗೆ ಮಿಸಲಾತಿ ಕೋರುವ ಬೆದರಿಕೆ ಸರಿಯಲ್ಲ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಲವು ಸಮಾಜಗಳು ಮೀಸಲಾತಿ ಬೇಡಿಕೆ ಇಟ್ಟಿದ್ದು, ಮೀಸಲಾತಿ ಪಡೆಯಲು ಅರ್ಹತೆ ಇರುವ ಸಮಾಜಕ್ಕೆ ಸೌಲಭ್ಯ ದೊರಕುತ್ತದೆ. ಶೋಷಿತ ಸಮುದಾಯಗಳ ಪರವಾಗಿ ಸ್ವಾಮೀಜಿಗಳು ನೇತೃತ್ವ ವಹಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಗಡುವಿನ ಒಳಗೆ ಮೀಸಲಾತಿ ನೀಡಬೇಕೆಂಬ ಬೆದರಿಕೆ ಸರಿಯಲ್ಲ. ಒತ್ತಾಯ ಮಾಡಿದ ತಕ್ಷಣ ಮೀಸಲಾತಿ ಕೊಡಲೂ ಸಾಧ್ಯವಿಲ್ಲ" ಎಂದರು.
ಇನ್ನು "ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಖರ ಹಿಂದುದ್ವವಾದಿ, ಹಾಗೆಂದು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಕಂಡಕಂಡಲ್ಲಿ ಹೇಳಿಕೆ ನೀಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.