ನವದೆಹಲಿ, ಫೆ.22 (DaijiworldNews/HR): ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ತ್ವರಿತಗತಿಯಲ್ಲಿ ಹೆಚ್ಚಿಸಿಕೊಳ್ಳಲು ಭಾರತ ದೇಶವು ಬದ್ಧವಾಗಿದೆ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕಾಗಿ ನೀಡಿರುವ ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಆಯೋಜಿಸಿದ್ದ ವೆಬಿನಾರ್ನಲ್ಲಿ ಮಾತನಾಡಿದ ಅವರು, "ಸ್ವಾತಂತ್ರ್ಯ ಸಿಗುವ ಮೊದಲು ನಾವು ನೂರಾರು ಶಸ್ತ್ರಾಸ್ತ್ರ ಮತ್ತು ರಕ್ಷಣಾ ಕ್ಷೇತ್ರದ ಉಪಕರಣಗಳ ತಯಾರಿಕಾ ಕಾರ್ಖಾನೆ ಗಳನ್ನು ಹೊಂದಿದ್ದೆವು. ಎರಡೂ ವಿಶ್ವ ಯುದ್ಧಗಳಿಗೆ ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗಿತ್ತು, ಆದರೆ ಹಲವು ಕಾರಣಗಳಿಂದಾಗಿ ಸ್ವಾತಂತ್ರ್ಯದ ನಂತರ ಈ ವ್ಯವಸ್ಥೆಯನ್ನು ಬಲಪಡಿಸಲಾಗಿಲ್ಲ" ಎಂದರು.
"ದೇಶದಲ್ಲಿರುವ ಇಂಥ ಪರಿಸ್ಥಿತಿಯಿಂದಾಗಿ ಸಣ್ಣ ಶಸ್ತ್ರಾಸ್ತ್ರಗಳಿಗೂ ನಾವು ಇತರ ರಾಷ್ಟ್ರಗಳತ್ತ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಈಗ ಭಾರತವು ಅತಿದೊಡ್ಡ ರಕ್ಷಣಾ ಆಮದುದಾರರಲ್ಲಿ ಒಂದಾಗಿದೆ. ಆದರೆ, ಇದು ಹೆಮ್ಮೆಪಡುವ ವಿಷಯವಲ್ಲ" ಎಂದು ಮೋದಿ ಒತ್ತಿ ಹೇಳಿದ್ದಾರೆ.
ಇನ್ನು "ಭಾರತೀಯರಲ್ಲಿ ಸಾಮರ್ಥ್ಯದ ಕೊರತೆಯಿಲ್ಲ ಈ ಹಿಂದೆ ಕೊರೊನಾ ಹರಡುವ ಮುನ್ನ ಭಾರತದಲ್ಲಿ ವೆಂಟಿಲೇಟರ್ಗಳನ್ನು ತಯಾರಿಸುತ್ತಿರಲಿಲ್ಲ. ಆದರೆ ಇದೀಗ ಸಾವಿರಾರು ಮಂದಿ ವೆಂಟಿಲೇಟರ್ ಉತ್ಪಾದಕರು ಹುಟ್ಟಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.