ಬೆಂಗಳೂರು, ಫೆ.22 (DaijiworldNews/HR): "ಅಪಾರ್ಟ್ಮೆಂಟ್ಗಳು ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಮತ್ತು ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಎಲೆಕ್ಟ್ರಿಕ್ ವಾಹನಗಳ ಬಳಕೆಯ ಬಗ್ಗೆ ಹಾರ್ವರ್ಡ್ ಇಂಡಿಯಾ ಕಾನ್ಫರೆನ್ಸ್ ವತಿಯಿಂದ ಏರ್ಪಡಿಸಲಾಗಿದ್ದ 'ಭವಿಷ್ಯದತ್ತ ಸುಸ್ಥಿರ ಸಾರಿಗೆ' ವರ್ಚುಯಲ್ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸಿದರಷ್ಟೇ ಸಾಕಾಗುವುದಿಲ್ಲ, ಎಲ್ಲೆಡೆಯೂ ಸುಲಭವಾಗಿ ಚಾರ್ಜ್ ಮಾಡಿಕೊಳ್ಳುವಂಥ ವ್ಯವಸ್ಥೆ ಇರಲೇಬೇಕು" ಎಂದರು.
ಇನ್ನು "ಮುಂಬರುವ ದಿನಗಳಲ್ಲಿ ಬ್ಯಾಟರಿ ವಾಹನಗಳು ಮಾರುಕಟ್ಟೆಗೆ ಬರಲಿದ್ದು, ಗ್ರಾಹಕರು ಬ್ಯಾಟರಿಗಳನ್ನು ಬಾಡಿಗೆಗೆ ಪಡೆದು ಆ ವಾಹನಗಳನ್ನು ಚಲಾಯಿಸಿಕೊಂಡು ಹೋಗಬಹುದು. ಎಲ್ಲೆಡೆ ಪೆಟ್ರೋಲ್ ಬಂಕ್ಗಳಂತೆ ಬ್ಯಾಟರಿ ಬಂಕ್ಗಳೂ ತಲೆ ಎತ್ತಲಿವೆ. ಆಗ ಗ್ರಾಹಕನಿಗೆ ಕಡಿಮೆ ದರದಲ್ಲಿ ವಾಹನವೂ ದೊರೆಯಲಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಗ್ರಾಹಕನು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಬಹುದು" ಎಂದು ಹೇಳಿದ್ದಾರೆ.