ನವದೆಹಲಿ, ಫೆ.22 (DaijiworldNews/PY): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದೆ.
"ರಾಹುಲ್, ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿಟ್ರೊಡಾ ಮತ್ತು ಯಂಗ್ ಇಂಡಿಯಾ ಇವರು ಎಪ್ರಿಲ್ 12ರೊಳಗೆ ತಮ್ಮ ನಿಲುವನ್ನು ತಿಳಿಸಬೇಕು" ಎಂದು ನ್ಯಾಯಮೂರ್ತಿ ಸುರೇಶ್ ಕೈಟ್ ತಿಳಿಸಿದ್ದಾರೆ.
ಬಿಜೆಪಿ ಸಂಸದರ ಪರ ಹಾಜರಾದ ವಕೀಲ ಸತ್ಯ ಸಭರ್ವಾಲ್ ಹಾಗೂ ಸೋನಿಯಾ ಗಾಂಧಿ ಪರ ಹಾಜರಾದ ವಕೀಲ ತರುಣ್ ಚೀಮಾ ಅವರು, "ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ನೋಟಿಸ್ ನೀಡಿದ್ದು, ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಎಪ್ರಿಲ್ 12ರವರೆಗೆ ತಡೆಹಿಡಿದಿದೆ" ಎಂದು ಖಚಿತಪಡಿಸಿದ್ದಾರೆ.
ರಾಹುಲ್ ಗಾಂಧಿ ಸೋನಿಯಾ ಗಾಂಧಿ ಅವರ ಪ್ರಮುಖ ಪಾಲುದಾರಿಕೆಯನ್ನು ಹೊಂದಿರುವ ಯಂಗ್ ಇಂಡಿಯನ್ ಪ್ರೈ.ಲಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಇಬ್ಬರೂ ಕಾಂಗ್ರೆಸ್ ನಾಯಕರ ವಿರುದ್ಧ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು.