ಲಕ್ನೋ, ಫೆ.22 (DaijiworldNews/MB) : ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರವು ವಿಧಾನಸಭೆಯಲ್ಲಿ ಸೋಮವಾರ 2021–22ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಈ ಬಜೆಟ್ 5.50 ಲಕ್ಷ ಕೋಟಿ ಗಾತ್ರದ್ದಾಗಿದೆ.
ಯೋಗಿ ಆದಿತ್ಯನಾಥ ಸರ್ಕಾರದ ಐದನೇ ಬಜೆಟನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ರಾಜ್ಯದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನ ಬಜೆಟ್ ಮಂಡನೆ ಮಾಡಿದ್ದಾರೆ.
ಈ ವರ್ಷದ ಬಜೆಟ್ನಲ್ಲಿ ಕಳೆದ ವರ್ಷಕ್ಕಿಂತ 37,410 ಕೋಟಿಯನ್ನು ಅಧಿಕಗೊಳಿಸಲಾಗಿದೆ. ಹಾಗೆಯೇ 27,598.40 ಕೋಟಿ ರೂಪಾಯಿಯನ್ನು ನೂತನ ಯೋಜನೆಗಳಿಗಾಗಿ ಮೀಸಲಿರಿಸಲಾಗಿದೆ.
ಕೊರೊನಾ ಕಾರಣದಿಂದಾಗಿ ಮುದ್ರಣ ಪ್ರತಿಯ ಬದಲಾಗಿ ಲ್ಯಾಪ್ಟಾಪ್ ಮೂಲಕ ಸಚಿವ ಸುರೇಶ್ ಕುಮಾರ್ ಅವರು ಬಜೆಟ್ ಮಂಡಿಸಿದ್ದು ಇದು ಉತ್ತರ ಪ್ರದೇಶದ ಮೊದಲ ಪೇಪರ್ ರಹಿತ ಬಜೆಟ್ ಆಗಿದೆ.
''ಉತ್ತರ ಪ್ರದೇಶವನ್ನು ಆತ್ಮ ನಿರ್ಭರ ರಾಜ್ಯವನ್ನಾಗಿ ಮಾರ್ಪಡಿಸುವುದೇ ಈ ಬಜೆಟ್ನ ಗುರಿಯಾಗಿದೆ. ರಾಜ್ಯದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ'' ಎಂದು ರಾಜ್ಯದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನ ಹೇಳಿದ್ದಾರೆ.