ಠಾಣ, ಫೆ.22 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ದದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮಹಾರಾಷ್ಟ್ರ ನ್ಯಾಯಾಲಯವು ಮೆ.15ರಂದು ನಿಗದಿ ಮಾಡಿದೆ.
ರಾಹುಲ್ ಗಾಂಧಿ ಅವರು 2014ರಲ್ಲಿ ಠಾಣೆಯ ಭಿವಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಮಹಾತ್ಮ ಗಾಂಧೀಜಿ ಅವರ ಆತ್ಮಹತ್ಯೆಯಲ್ಲಿ ಆರ್ಎಸ್ಎಸ್ನ ಕೈವಾಡವಿದೆ ಎಂದು ಆರೋಪಿಸಿದ್ದರು. ಆರ್ಎಸ್ಎಸ್ ಸಂಘದ ಸ್ಥಳೀಯ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಆ ವಿಡಿಯೋದ ಆಧಾರದ ಮೇಲೆ ರಾಹುಲ್ ಗಾಂಧಿ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಭಿವಂಡಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2018ರಲ್ಲಿ ಅರ್ಜಿ ವಿಚಾರಣೆ ನಡೆಸಿದ್ದು, ರಾಹುಲ್ ಗಾಂಧಿ ವಿರುದ್ದದ ಮಾನನಷ್ಟ ಮೊಕದ್ದಮೆಯ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು.
ಈ ಅರ್ಜಿಯ ಸಂಬಂಧ ಇದೀಗ ನ್ಯಾಯಾಲಯ ಶನಿವಾರ ವಿಚಾರಣೆ ನಡೆಸಿದೆ. ಈ ಸಂದರ್ಭ ರಾಹುಲ್ ಪರ ವಕೀಲರು ಕೊರೊನಾ ಪ್ರಯಾಣ ನಿರ್ಬಂಧದ ಹಿನ್ನೆಲೆ ರಾಹುಲ್ ಗಾಂಧಿ ಕೋರ್ಟ್ಗೆ ಹಾಜರಾಗಲು ಸಾಧ್ಯವಿಲ್ಲ. ಇದರಲ್ಲಿ ನ್ಯಾಯಾಲಯ ವಿನಾಯತಿ ನೀಡಬೇಕು ಎಂದು ಮನವಿ ಮಾಡಿದ್ದು, ನ್ಯಾಯಾಲಯ ಇದಕ್ಕೆ ಸಮ್ಮತಿ ಸೂಚಿಸಿತ್ತು.
"ಸ್ಥಳೀಯ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಈ ಹಿನ್ನೆಲೆ ಈ ಪ್ರಕರಣದ ಬಗ್ಗೆ ಮೇ15 ರಂದು ವಿಚಾರಣೆ ನಡೆಸಲಾಗುವುದು. ಅರ್ಜಿದಾರರ ಹೇಳಿಕೆಯನ್ನು ಈ ಸಂದರ್ಭ ದಾಖಲಿಸಲಾಗುತ್ತದೆ" ಎಂದು ಮ್ಯಾಜಿಸ್ಟ್ರೇಟ್ ಜೆ.ವಿ ಪಲಿವಾಲ್ ಅವರು ಹೇಳಿದ್ದಾರೆ.