ಗ್ವಾಲಿಯರ್, ಫೆ.22 (DaijiworldNews/MB) : ''ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಸೇರಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಕೃಷಿ ಕಾಯ್ದೆಯನ್ನೇ ರದ್ದು ಮಾಡಲು ಆಗಲ್ಲ'' ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನೀವು ಕಾನೂನು ರದ್ದು ಮಾಡಬೇಕೆಂದು ಆಗ್ರಹ ಮಾಡುತ್ತಿದ್ದೀರಿ. ಆದರೆ ನೀವು ಪ್ರತಿಭಟನೆಗೆ ಜನರನ್ನು ಸೇರಿಸಿದ್ದೀರಿ ಎಂಬ ಕಾರಣಕ್ಕೆ ನಾವು ಕಾನೂನನ್ನೇ ರದ್ದು ಮಾಡಲ್ಲ. ಆ ಕಾಯ್ದೆಯಲ್ಲಿ ಯಾವ ಅಂಶ ರೈತ ವಿರೋಧಿಯಾಗಿದೆ ಎಂದು ಪ್ರತಿಭಟಿಸುತ್ತಿರುವ ಮುಖಂಡರೇ ತೋರಿಸಿಕೊಡಲಿ. ಸರ್ಕಾರ ಬಳಿಕ ಕೆಲವು ತಿದ್ದುಪಡಿ ಮಾಡಲು ಸಿದ್ದವಾಗಿದೆ. ಪ್ರಧಾನಿ ಮೋದಿಯವರೇ ನನಗೆ ಅದನ್ನು ಹೇಳಿದ್ದಾರೆ'' ಎಂದರು.
''ಈ ವಿಷಯ ಬಹಳ ಸೂಕ್ಷ್ಮವಾದ ಹಿನ್ನೆಲೆ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ 12 ಸುತ್ತುಗಳ ಮಾತುಕತೆ ನಡೆಸಿದೆ. ಆದರೆ ನೀವು ಆ ಕಾಯ್ದೆಯಲ್ಲಿರುವ ತೊಡಕುಗಳ ಪಟ್ಟಿ ಮಾಡಿ ನೀಡಬೇಕು. ಆ ಬಳಿಕ ನಾವು ತಿದ್ದುಪಡಿ ವಿಚಾರಕ್ಕೆ ಬರುತ್ತೇವೆ'' ಎಂದು ಸವಾಲೆಸೆದರು.