ಮೈಸೂರು, ಫೆ.22 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಆದರೆ, ಅವರು ಎಲ್ಲೂ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ" ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಅನ್ನು ರೈಲ್ವೇ ಇಲಾಖೆ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಆದರೆ, ಈ ಬಗ್ಗೆ ಅವರು ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡುತ್ತಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವ ಕಾರಣ ಅವರಿಗೆ ಯಾವುದೇ ರೀತಿಯಾಗಿ ಮಾತನಾಡಲು ಆಗದ ಕಾರಣ ಸುಖಾಸುಮ್ಮನೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದರು.
"ಸರ್ಕಾರ ದಕ್ಷವಾಗಿ ಆಡಳಿತ ನಡೆಸುತ್ತಿರುವ ಕಾರಣ, ಅವರಿಗೆ ಮಾತನಾಡಲು ಬೇರೆ ವಿಷಯ ಇಲ್ಲದ ಕಾರಣ ಈ ರೀತಿಯಾದ ಹೇಳೀಕೆ ನೀಡುತ್ತಿದ್ದಾರೆ. ಅವರು ಬಾಯಿ ಚಪಲಕ್ಕಾಗಿ ಲೆಕ್ಕ ಕೇಳುತ್ತಿದ್ದಾರೆ" ಎಂದು ಹೇಳಿದರು.
"ರಾಮಮಂದಿರ ನಿರ್ಮಾಣಕ್ಕೆ ಯಾರೂ ಕೂಡಾ ಬಲವಂತಾಗಿ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಸಂಗ್ರಹ ಮಾಡಿದ ಪ್ರತಿಯೊಂದು ಪೈಸೆಯೂ ಕೂಡಾ ಮಂದಿರ ನಿರ್ಮಾಣಕ್ಕೆ ಉಪಯೋಗವಾಗಲಿದೆ. ಅಲ್ಲದೇ, ಎಲ್ಲದಕ್ಕೂ ಲೆಕ್ಕ ಇಡಲಾಗಿದೆ. ದೇಣಿಗೆ ಸಂಗ್ರಹಿಸಿದ ಮನೆ ಸಂಖ್ಯೆ ಸೇರಿದಂತೆ ಸಹಿ, ಪಾನ್ ಸಂಖ್ಯೆಯನ್ನು ಕೂಡಾ ನಮೂದಿಸಲಾಗುತ್ತಿದೆ. ಇದರೊಂದಿಗೆ ರಶೀದಿಯನ್ನು ಕೂಡಾ ನೀಡಲಾಗುತ್ತಿದೆ" ಎಂದರು.
"ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸುವ ದೇಣಿಗೆಯನ್ನು ದುರುಪಯೋಗ ಮಾಡುತ್ತಿಲ್ಲ. ದೇಣಿಗೆಯ ಲೆಕ್ಕ ಖಂಡಿತವಾಗಿಯೂ ಸಿಗಲಿದೆ" ಎಂದು ಹೇಳಿದರು.