ಪುದುಚ್ಚೇರಿ, ಫೆ.22 (DaijiworldNews/MB) : ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ಪುದುಚ್ಚೇರಿಯ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರವು ಪತನಗೊಂಡಿದ್ದು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು, ''ಇದು ಪ್ರಜಾಪ್ರಭುತ್ವದ ಕೊಲೆ'' ಎಂದು ದೂರಿದ್ದಾರೆ.
''ಸ್ಪೀಕರ್ ತೀರ್ಪು ತಪ್ಪಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ, ಎನ್ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷವು 3 ನಾಮನಿರ್ದೇಶಿತ ಸದಸ್ಯರ ಮತದಾನದ ಶಕ್ತಿಯನ್ನು ಬಳಸಿಕೊಂಡು ಬಳಸಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ರಜಾಪ್ರಭುತ್ವದ ಕೊಲೆ. ಪುದುಚೇರಿ ಮತ್ತು ಈ ದೇಶದ ಜನರು ಅವರಿಗೆ ಪಾಠ ಕಲಿಸುತ್ತಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಕಾಂಗ್ರೆಸ್ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿತ್ತು. ಆರೋಗ್ಯ ಸಚಿವರಾಗಿದ್ದ ಶಾಸಕ ಮಲ್ಲಾಡಿ ಕೃಷ್ಣ ರಾವ್ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ನ ಓರ್ವ ಶಾಸಕ ಹಾಗೂ ಮಿತ್ರಪಕ್ಷ ಡಿಎಂಕೆಯ ಓರ್ವ ಶಾಸಕ ಕೂಡಾ ರಾಜೀನಾಮೆ ನೀಡಿದ್ದರು. ಇದರಿಂಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರಕಾರದ ಸ್ಥಾನವು 12ಕ್ಕೆ ಕುಸಿತವಾಗಿತ್ತು. ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡ ಬೆನ್ನಲ್ಲೇ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ.