ಮುಂಬೈ, ಫೆ.22 (DaijiworldNews/HR): ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಎಲ್ಗರ್ ಪರಿಷದ್ ಪ್ರಕರಣ ಹಾಗೂ ಮಾವೋವಾದಿಗಳ ಜೊತೆ ನಂಟು ಹೊಂದಿದ ಪ್ರಕರಣದದಲ್ಲಿ ಅವರು ಆರೋಪಿಯಾಗಿರುವ ವರವರ ರಾವ್ಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿದ್ದು, ಜಾಮೀನಿನ ಬಳಿಕ ಅವರು ಮುಂಬೈ ಬಿಟ್ಟು ಬೇರೆಡೆಗೆ ತೆರಳದಿರುವಂತೆ ಸೂಚಿಸಲಾಗಿದೆ.
ಇನ್ನು ದಲಿತರು ಮರಾಠಾ ಪೇಶ್ವೆಗಳ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ ದ್ವಿಶತಮಾನೋತ್ಸವ ಆಚರಣೆ ವೇಳೆಯಲ್ಲಿ ಭೀಮಾ ಕೋರೆಗಾಂವ್ನಲ್ಲಿ 2018ರ ಜನವರಿ 1ರಂದು ಹಿಂಸಾಚಾರ ನಡೆದಿದ್ದು, ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಹಿಂಸಾಚಾರಕ್ಕೆ ನಕ್ಸಲರ ನಂಟು ಇದೆ ಎಂದು ಆರೋಪಿಸಿದ್ದರು. 2017ರ ಡಿಸೆಂಬರ್ 31ರಂದು ನಡೆದ ಸಭೆಗೆ ನಕ್ಸಲರೇ ಹಣಕಾಸು ನೆರವು ನೀಡಿದ್ದರು. ಈ ಸಭೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಗಿದ್ದು, ಅದು ಹಿಂಸೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದು, ಈ ಪ್ರಕರಣದಲ್ಲಿ ಕವಿ ವರವರರಾವ್, ವಕೀಲೆ ಸುಧಾ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತರಾದ ವರ್ನನ್ ಗೊನ್ಸಾಲ್ವೆಸ್ ಮತ್ತು ರೋನಾ ವಿಲ್ಸನ್, ಮಾನವ ಹಕ್ಕು ಹೋರಾಟಗಾರರಾದ ಅರುಣ್ ಫೆರೇರಾ ಮತ್ತು ಗೌತಮ್ ನವಲ್ಖಾ ಅವರನ್ನು ಬಂಧಿಸಲಾಗಿದೆ.