ಠಾಣೆ, ಫೆ.22 (DaijiworldNews/HR): "ಕೇಂದ್ರ ಸರ್ಕಾರವು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯನ್ನು ಸ್ಥಗಿತಗೊಳಿಸಿ, ಹೊಸ ಸಂಸತ್ ಭವನ ನಿರ್ಮಿಸಲು ಮುಂದಾಗಿದೆ. ಆದರೆ ಈ ಕೊರೊನಾ ಸಮಯದಲ್ಲಿ ಇದರ ಅವಶ್ಯಕತೆಯಿಲ್ಲ" ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.
ಈ ಕುರಿತು ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, "ಸೆಂಟ್ರಲ್ ವಿಸ್ತಾ ಯೋಜನೆಗಾಗಿ ಸರ್ಕಾರ 800 ರಿಂದ 1000 ಕೋಟಿ ಖರ್ಚು ಮಾಡುತ್ತಿದ್ದು, ಈ ಕೊರೊನಾಸಂದರ್ಭದಲ್ಲಿ ಇದರ ಅವಶ್ಯಕತೆ ಇಲ್ಲ, ಸಂಸದರ ನಿಧಿಯನ್ನು ಸ್ಥಗಿತಗೊಳಿಸಿ, ಆಸ್ಪತ್ರೆ ನಿರ್ಮಿಸಿದ್ದರೆ, ನಾವು ಸಂತೋಷವಾಗಿ ನಿಧಿಯನ್ನು ಬಿಟ್ಟುಕೊಡುತ್ತಿದ್ದೆವು" ಎಂದರು.
ಇನ್ನು 2020ರಲ್ಲಿ ಕೇಂದ್ರ ಸರ್ಕಾರವು ಆರೋಗ್ಯ ವ್ಯವಸ್ಥೆ ಮತ್ತು ಕೊರೊನಾ ಪರಿಣಾಮಕಾರಿ ನಿರ್ವಹಣೆಗಾಗಿ 2020-21, 2021-22ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿತ್ತು ಎನ್ನಲಾಗಿದೆ.