ನವದೆಹಲಿ, ಫೆ.22 (DaijiworldNews/PY): "ದೇಶದಲ್ಲಿ ಏರುತ್ತಿರುವ ಇಂಧನ ಬೆಲೆಗಳ ನಡುವೆ, ಉತ್ಪಾದನಾ ದೇಶಗಳು ಅಧಿಕ ಲಾಭಗಳಿಸಲು ಕಡಿಮೆ ಇಂಧನ ಉತ್ಪಾದನೆಯೇ ಬೆಲೆ ಏರಿಕೆಯ ಹಿಂದಿನ ಕಾರಣ" ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
"ಪೆಟ್ರೋಲಿಯಂ ಉತ್ಪಾದನಾ ದೇಶಗಳು ಲಾಭ ಗಳಿಸುವ ನಿಟ್ಟಿನಲ್ಲಿ ಉತ್ಪಾದನಾ ಮಟ್ಟವನ್ನು ಕಡಿಮೆಗೊಳಿಸುವ ಕಾರಣ ಪೆಟ್ರೋಲಿಯಂ ಖರೀದಿ ಮಾಡುವ ರಾಷ್ಟ್ರಗಳಿಗೆ ಹೊಡೆತ ಬಿದ್ದಿದೆ" ಎಂದಿದ್ದಾರೆ.
"ಪೆಟ್ರೋಲ್ ಹಾಗೂ ಡೀಸೆಲ್ ದರ ಹತ್ತು ದಿನಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಏರುತ್ತಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ವಿವಿಧ ಕಾರ್ಯಗಳನ್ನು ಮಾಡುತ್ತಿವೆ" ಎಂದು ಹೇಳಿದ್ದಾರೆ.
"ಪೆಟ್ರೋಲ್ ಬೆಲೆ ಏರಿಕೆಗೆ ಕೊರೊನಾ ಪರಿಸ್ಥಿತಿಯೂ ಕಾರಣ. ದೇಶದಲ್ಲಿ ನಾವು ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜನರಿಂದ ತೆರಿಗೆ ಸಂಗ್ರಹ ಮಾಡಲೇಬೇಕಾಗಿದೆ. ಹಣಕಾಸು ಸಚಿವರು ಹಾಗೂ ರಾಜ್ಯ ಸರ್ಕಾರಗಳು ಒಂದು ಮಾರ್ಗವನ್ನು ಕಂಡುಕೊಳ್ಳಬಹುದು ಎಂಬುವುದಾಗಿ ನಾನು ನಂಬುತ್ತೇನೆ" ಎಂದಿದ್ದಾರೆ.