ಕಲಬುರಗಿ, ಫೆ.22 (DaijiworldNews/MB) : ಕಲಬುರಗಿ ರೌಡಿ ನಿಗ್ರಹ ದಳದ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆತನಿಂದ ಸುಮಾರು 300 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಯಲ್ಲಿರುವ ಬಂಧಿತ ಆರೋಪಿ ಭೀಮು
ಬಂಧಿತ ವ್ಯಕ್ತಿಯನ್ನು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ನಿವಾಸಿ ಭೀಮು ಎಂದು ಗುರುತಿಸಲಾಗಿದೆ.
ಇಬ್ಬರು ಹೆಣ್ಣುಮಕ್ಕಳು ಸೇರಿ ನಾಲ್ಕು ಮಂದಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಪಡೆದ ಕಲಬುರಗಿ ರೌಡಿ ನಿಗ್ರಹ ದಳದ ಪೊಲೀಸರು ಕಾರನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದು ಈ ಸಂದರ್ಭ ಕಾರಿನಲ್ಲಿದ್ದ ಆರೋಪಿ ಭೀಮು ಎಂಬಾತ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗುವ ಯತ್ನ ಮಾಡಿದ್ದಾನೆ. ಈ ಸಂದರ್ಭ ಪೊಲೀಸರು ಭೀಮು ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.