ಭೋಪಾಲ್, ಫೆ.22 (DaijiworldNews/PY): 20 ವರ್ಷದ ಯುವತಿಯೋರ್ವಳನ್ನು 39 ವರ್ಷದ ಶಾಲಾ ಶಿಕ್ಷಕ, ಸ್ಥಳೀಯ ರಾಜಕೀಯ ಮುಖಂಡ ಹಾಗೂ ಸ್ನೇಹಿತನೋರ್ವ ಗ್ಯಾಂಗ್ ರೇಪ್ ಮಾಡಿರುವ ಘಟನೆ ಮಧ್ಯಪ್ರದೇಶದ ವಿಂಧ್ಯಾ ಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಯುವತಿ ಮನೆಗೆ ತೆರಳುತ್ತಿದ್ದ ಸಂದರ್ಭ ಪ್ರಮುಖ ಆರೋಪಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜೇಶ್ ಶುಕ್ಲ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಅವರ ಇಬ್ಬರು ಸಹಾಯಕರು ಸೇರಿ ಬಲವಂತದಿಂದ ಕಾರಿನಲ್ಲಿ ಪಕ್ಕದ ಹಳ್ಳಿಗೆ ಕರೆದೊಯ್ದಿದ್ದಾರೆ. ಬಳಿಕ ನರ್ಜನ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರಕ್ಕೂ ಮೊದಲು ಆಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿದ್ದು, ಎರಡು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ. ನಂತರ ಯುವತಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಏತನ್ಮಧ್ಯೆ ಯುವತಿ ಕಾಣೆಯಾಗಿರುವ ಬಗ್ಗೆ ಆಕೆಯ ಪೋಷಕರು ಆತಂಕಗೊಂಡಿದ್ದು, ಭೀತಿಗೊಂಡ ಪೋಷಕರು ಜೈತ್ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಯುವತಿ ಮನೆಗೆ ಬಂದಿದ್ದು, ಈ ವೇಳೆ ಆಕೆಯನ್ನು ಪೋಷಕರು ಪ್ರಶ್ನಿಸಿದಾಗ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಕೂಡಲೇ ಆಕೆಯ ಪೋಷಕರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಯುವತಿಯಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದು, ಆರೋಪಿಗಳಾದ ಪ್ರಾಥಮಿಕ ಶಾಲಾ ಶಿಕ್ಷಕ ರಾಜೇಶ್ ಶುಕ್ಲ, ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಶಹಾದೋಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅವಧೇಶ್ ಗೋಸ್ವಾಮಿ ತಿಳಿಸಿದ್ದಾರೆ.
"ಸಂತ್ರಸ್ಥ ಯುವತಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ರಾಜೇಶ್ ಶುಕ್ಲಾ ಪರಸ್ಪರ ಗೆಳೆಯರಾಗಿದ್ದು, ಇಬ್ಬರು ಕೂಡಾ ಆಗಾಗ ಭೇಟಿಯಾಗುತ್ತಿದ್ದರು. ರಾಜೇಶ್ ಇದನ್ನೇ ಬಂಡವಾಳವಾಗಿರಿಸಿಕೊಂಡು ತನ್ನ ಗೆಳೆಯರೊಂದಿಗೆ ಸೇರಿ ಕೃತ್ಯವೆಸಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.