ನವದೆಹಲಿ, ಫೆ.22 (DaijiworldNews/MB) : ದೇಶದಲ್ಲಿ ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು ಕೆಲವು ನಗರದಲ್ಲಿ ಪೆಟ್ರೋಲ್ ಬೆಲೆ 100 ಕ್ಕೆ ತಲುಪಿದೆ. ಈ ತೈಲ ಬೆಲೆ ಏರಿಕೆಯಿಂದಾಗಿ ಇತರೆ ವಸ್ತು ಹಾಗೂ ಸೇವೆಗಳ ದರವೂ ಕೂಡಾ ಏರಿಕೆ ಕಾಣುತ್ತಲೇ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಬಂಡವಾಳಶಾಹಿ ಮಿತ್ರರಿಗಾಗಿ ಕೃಷಿ ಕಾನೂನು ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿರುವ ರಾಹುಲ್ ಗಾಂಧಿಯವರು ಈ ತೈಲ ಬೆಲೆ ಏರಿಕೆಯ ವಿಚಾರದಲ್ಲೂ ಕೇಂದ್ರ ಸರ್ಕಾರವು ತನ್ನ ಬಂಡವಾಳಶಾಹಿ ಮಿತ್ರರ ಪರವಾಗಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಪೆಟ್ರೋಲ್ ಪಂಪ್ನಲ್ಲಿ ಕಾರಿಗೆ ತೈಲ ಹಾಕುವಾಗ, ವೇಗವಾಗಿ ಏರುತ್ತಿರುವ ಮೀಟರ್ ಅನ್ನು ನೋಡಿದಾಗ, ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ ಆದರೆ ಕಡಿಮೆಯಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಪೆಟ್ರೋಲ್ ಲೀಟರ್ಗೆ 100 ರೂಪಾಯಿ ಆಗಿದೆ. ನಿಮ್ಮ ಜೇಬು ಖಾಲಿ ಮಾಡಿ ತನ್ನ ಸ್ನೇಹಿತರಿಗೆ ನೀಡುವ ಮಹತ್ತರ ಕಾರ್ಯವನ್ನು ಮೋದಿ ಸರ್ಕಾರ ಮಾಡುತ್ತಿದೆ'' ಎಂದು ಟೀಕಿಸಿದ್ದಾರೆ.