ಇಂದೋರ್, ಫೆ.22 (DaijiworldNews/MB) : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್, ತಾಂತ್ರಿಕ ದೋಷದಿಂದ ಕೆಟ್ಟು, 10 ಅಡಿ ಕೆಳಕ್ಕೆ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್, ಲಿಫ್ಟ್ನಲ್ಲಿದ್ದ ಕಮಲ್ ನಾಥ್ ಹಾಗೂ ಇತರ ಕಾಂಗ್ರೆಸ್ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮಂತ್ರಿ ರಾಮೇಶ್ವರ್ ಪಟೆಲ್ ಅವರನ್ನು ಭೇಟಿ ಮಾಡಲು ಕಮಲನಾಥ್ ಹಾಗೂ ಇತರೆ ಕಾಂಗ್ರೆಸ್ ನಾಯಕರು ಇಂದೋರ್ಗೆ ತೆರಳಿದ್ದು ಆಸ್ಪತ್ರೆಯಲ್ಲಿ ಲಿಫ್ಟ್ ಏರಿದ್ದರು. ಆಗ ಲಿಫ್ಟ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಲಿಫ್ಟ್ ಹಠಾತ್ತನೇ ಸ್ಥಗಿತಗೊಂಡು ಮೇಲೆ ಚಲಿಸುವ ಬದಲಾಗಿ 10 ಅಡಿ ಕೆಳ ಭಾಗಕ್ಕೆ ಬಿದ್ದಿದೆ. ಲಿಫ್ಟ್ನ ಬಾಗಿಲು ಕೂಡಾ ಮುಚ್ಚಲ್ಪಟ್ಟಿತ್ತು.
ಕೂಡಲೇ ಕಮಲಾನಾಥ್ ಅವರ ಭದ್ರತಾ ವ್ಯಕ್ತಿಗಳು ಲಿಫ್ಟ್ ಕೆಟ್ಟು ನಿಂತ ಸ್ಥಳಕ್ಕೆ ಧಾವಿಸಿ ಲಿಫ್ಟ್ ಇಂಜಿನಿಯರ್ಗೆ ಮಾಹಿತಿ ನೀಡಿ ಲಿಫ್ಟ್ ಬಾಗಿಲು ಒಡೆಯಲಾಗಿದ್ದು ಅದೃಷ್ವಶಾತ್ ಕಮಲ್ ನಾಥ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ''ಇಂದೋರ್ನ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಜೀ ಮತ್ತು ಇತರ ಸಹೋದ್ಯೋಗಿಗಳು ಲಿಫ್ಟ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಲಿಫ್ಟ್ ಕೆಳಕ್ಕೆ ಬಿದ್ದ ಘಟನೆ ತಿಳಿದು ಬಂದಿದೆ. ಕರೆ ಮಾಡಿ ಕಮಲನಾಥ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ದೇವರ ಅನುಗ್ರಹದಿಂದ ಎಲ್ಲರೂ ಚೆನ್ನಾಗಿದ್ದಾರೆ. ಈ ಅಪಘಾತದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ'' ಎಂದು ತಿಳಿಸಿದ್ದಾರೆ.