ಬೆಂಗಳೂರು, ಫೆ.22 (DaijiworldNews/PY): ರಾಜ್ಯ ಸರ್ಕಾರವು, ಪಂಚಮಸಾಲಿ 2ಎ ಮೀಸಲಾತಿ ನೀಡುವ ಬಗ್ಗೆ ಮಾಡಿದ ಎಲ್ಲಾ ಯತ್ನಗಳು ವಿಫಲವಾಗಿದ್ದು, ಈ ಹಿನ್ನೆಲೆ ಸಮಾವೇಶದ ನಂತರ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾರ್ಚ್ 4ರಿಂದ ಪ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲು ಪಂಚಮಸಾಲಿ ಸ್ವಾಮೀಜಿ ನಿರ್ಧರಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪಂಚಮಸಾಲಿ ಸಮುದಾಯ ಹಾಗೂ ಸ್ವಾಮೀಜಿ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದು, ಸರ್ಕಾರ ಅವರ ಮಾತಿಗೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆ ಸಮುದಾಯದ ಒತ್ತಾಯದ ಮೇರೆಗೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪಂಚಮಸಾಲಿ ಜನರ ಜೊತೆ ವಿಧಾನಸೌಧದ ಕಡೆಗೆ ಪಾದಯಾತ್ರೆ ಮುಂದುವರೆಸಲು ತೀರ್ಮಾನ ಮಾಡಿದ್ದರು. ಈ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದು, ಆದರೆ, ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮನವೊಲಿಕೆ ಮಾಡಿದ್ದರಿಂದ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.
ಇನ್ನೊಂದೆಡೆ ಸಿಎಂ ನಿವಾಸ ಸೇರಿದಂತೆ ವಿಧಾನಸೌಧ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕುಮಾರಕೃಪಾ ರಸ್ತೆ ಸೇರಿದಂತೆ ವಿಧಾನಸೌಧ, ಬಳ್ಳಾರಿ ರಸ್ತೆ ಹಾಗೂ ಏಪೋರ್ಟ್ ರಸ್ತೆಗಳ ವಾಹನ ಸಂಚಾರವನ್ನು ಪೊಲೀಸರು ಬದಲಾವಣೆ ಮಾಡಿದ್ದರು.