ಕಾಸರಗೋಡು, ಫೆ. 21 (DaijiworldNews/SM): ಕೇರಳದಲ್ಲಿ ಶೀಘ್ರದಲ್ಲೇ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಇದರ ಆರಂಭಿಕ ಹಂತವಾಗಿ ರವಿವಾರದಂದು ಕಾಸರಗೋಡಿನಲ್ಲಿ ನಡೆದ ಬಿಜೆಪಿಯ ವಿಜಯ ಯಾತ್ರೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದಾರೆ.
ಇಂದು ಆರಂಭಗೊಂಡ ವಿಜಯಯಾತ್ರೆ ಮಾರ್ಚ್ 7ರ ತನಕ ನಡೆಯಲಿದೆ. ಕೇರಳದ ಉದ್ದಗಲಕ್ಕೂ ತೆರಳಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾಧ್ಯಕ್ಷ ಸುರೇಂದ್ರನ್ ಸಿದ್ದತೆಗಳನ್ನು ನಡೆಸಿದ್ದಾರೆ. ದೇಶದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕಮಲ ಅರಳಿಸಿರುವ ಬಿಜೆಪಿಗೆ ಕೇವಲ ಬೆರಳೆಣಿಕೆಯಷ್ಟೇ ರಾಜ್ಯಗಳು ಕಗ್ಗಂಟಾಗಿ ಪರಿಣಮಿಸಿದ್ದು, ಅವುಗಳಲ್ಲಿ ಕೇರಳವೂ ಕೂಡ ಒಂದಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ಎಂಬಂತೆ ಪಕ್ಷದ ಹಿರಿಯ ನಾಯಕರು, ಪ್ರಭಾವಿ ಮುಖಂಡರು ಇಂತಹ ರಾಜ್ಯಗಳಿಗೆ ತೆರಳಿ ಜನರನ್ನು ಕಮಲದತ್ತ ಸೆಳೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ಕೇರಳದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಸದ್ಯ ಹೊಂದಿರುವ ಸೀಟುಗಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಬಿಜೆಪಿಯ ಪ್ರಭಾವಿ ನಾಯಕ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರವಿವಾರ ಪ್ರವಾಸ ಕೈಗೊಂಡಿದ್ದು, ಬಿಜೆಪಿ ವಿಜಯಯಾತ್ರೆಗೆ ಚಾಲನೆ ಕೊಟ್ಟಿದ್ದಾರೆ. ಯೋಗಿ ಆಗಮನ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರವಿವಾರ ವಿಜಯಯಾತ್ರೆಗೆ ಚಾಲನೆ ನೀಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇರಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೊರೊನಾ ತಡೆಗಟ್ಟಲು ವಿಫಲವಾದ ಸರಕಾರ ರಾಜ್ಯದಲ್ಲಿ ಅಭಿವೃದ್ಧಿ ನಡೆಸಲು ಸಾಧ್ಯವೇ ಎಂದು ವಾಗ್ದಾಳಿ ನಡೆಸಿದರು.
ಸರಕಾರ ಕೇರಳದ ಅಭಿವೃದ್ಧಿಗೆ ಒತ್ತು ನೀಡದೆ ಕೇವಲ ಪಕ್ಷದ ಅಭಿವೃದ್ಧಿಗೆ ಮಾತ್ರವೇ ಗಮನ ನೀಡುತ್ತಿದ್ದು, ಈ ಸರಕಾರವನ್ನು ಅಧಿಕಾರದಿಂದ ಜನತೆ ದೂರವಿಡಬೇಕೆಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮನವಿ ಮಾಡಿದರು.