ಹಾಸನ, ಫೆ.21 (DaijiworldNews/PY): "ತಮಿಳುನಾಡು ಸರ್ಕಾರ ತೆಗೆದುಕೊಂಡಿರುವ ಗೋದಾವರಿ-ಕಾವೇರಿ ನದಿ ಸಂಪರ್ಕಿಸುವ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸುವ ಬಗ್ಗೆ ರಾಜ್ಯ ಸರ್ಕಾರ ಚಕಾರವೆತ್ತದಿರುವುದು ಸೂಕ್ತವಲ್ಲ. ಇದೊಂದು ಗಂಭೀರವಾದ ವಿಚಾರವಾಗಿದೆ" ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ತಿಳಿಸಿದರು.
ರವಿವಾರ ತಾಲ್ಲೂಕಿನ ಉಪ್ಪಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, "ತಮಿಳುನಾಡು ಸರ್ಕಾರ ರಾಜ್ಯದ ಪಾಲಿನ ನೀರು ಕಬಳಿಸುವ ಸಲುವಾಗಿ ಪ್ರಧಾನಿ ಮೆಲೆ ಒತ್ತಡ ಹಾಕುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯದ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಆ ಸಂದರ್ಭ ಬಂದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇನೆ" ಎಂದು ಹೇಳಿದರು.
"ಹಲವು ಸಮಾಜಗಳ ಮೀಸಲಾತಿಗೋಸ್ಕರ ಹೋರಾಟ ಮಾಡುತ್ತೇವೆ. ಆದರೆ, ಇದಕ್ಕೆ ವಿರೋಧಿಸುವುದಿಲ್ಲ. ಅದರೆ, ಶೇ.50ಕ್ಕಿಂತ ಅಧಿಕ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಗೆ ಬಗೆಹರಿಸುತ್ತಾರೋ ತಿಳಿದಿಲ್ಲ" ಎಂದರು.
ರೈತರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸರ್ಕಾರದ ಶಕ್ತಿಯಿಂದ ರೈತರ ಪ್ರತಿಭಟನೆಯನ್ನು ಮಣಿಸಲು ಆಗದು. ಸಂಘರ್ಷದ ಬದಲಾಗಿ ಮಾತುಕತೆ ಮುಖೇನ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿಗೆ ತಿಳಿಸಿದ್ದೇನೆ. ಇದಕ್ಕೆ ನನ್ನನ್ನು ಆಹ್ವಾನಿಸಿದ್ದಲ್ಲಿ ಸಲಹೆ ನೀಡಲು ನಾನು ಸಿದ್ದನಿದ್ದೇನೆ" ಎಂದು ಹೇಳಿದರು.