ಕಲಬುರಗಿ, ಫೆ.21 (DaijiworldNews/PY): "ರೈತರ ಮಕ್ಕಳಿಗೆ ಬಿಎಸ್ಸಿ ಕೃಷಿ ಪದವಿಗಳ ಪ್ರವೇಶಾತಿಯಲ್ಲಿ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ತಾತ್ವಿಕವಾಗಿ ಒಪ್ಪಿಗೆಯಾಗಿದೆ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಗ ರೈತರ ಮಕ್ಕಳಿಗಾಗಿ ಕೃಷಿ ಪದವಿ ಪ್ರವೇಶಾತಿಯಲ್ಲಿ ಇರುವ ಶೇ.40ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಊ ಬಗ್ಗೆ ಬಜೆಟ್ನಲ್ಲಿ ಸಿಎಂ ಅವರು ಅಧಿಕೃತವಾಗಿ ಪ್ರಕಟಪಡಿಸಲಿದ್ದಾರೆ" ಎಂದು ತಿಳಿಸಿದರು.
"ಬಿಎಸ್ಸಿ ಕೃಷಿ ಸೇರಿದಂತೆ ತೋಟಗಾರಿಕೆ, ಪಶು ವಿಜ್ಞಾನ ಹಾಗೂ ಇತರೆ ಕೃಷಿಗೆ ಸಂಬಂಧಪಟ್ಟ ಕೋರ್ಸ್ಗಳ ಪ್ರವೇಶಾತಿಯಲ್ಲಿ ಶೇ.50ರಷ್ಟು ಹೆಚ್ಚಾದಲ್ಲಿ ರೈತರ ಮಕ್ಕಳಿಗೆ ನೆರವಾಗಲಿದೆ" ಎಂದು ಹೇಳಿದರು.
"ಹಸು ಹಾಗೂ ಎತ್ತುಗಳು ಸಾವನ್ನಪ್ಪಿದರೆ ಪರಿಹಾರ ನೀಡುವ, ಮೇವಿನ ಬಣಮೆ ಸುಟ್ಟಲ್ಲಿ 50 ಸಾವಿರ. ರೂ.ಪರಿಹಾರ ನೀಡುವ ಹಾಗೂ ಇತರೆ ವಿಷಯಗಳ ಬಗ್ಗೆ ಬಜೆಟ್ನಲ್ಲಿ ಘೋಷಣೆಯಾಗಲಿದೆ" ಎಂದರು.
"ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಯಶಸ್ವಿಯಾಗಿ ಶೇ.97.07 ರಷ್ಟು ಸಾಧನೆ ಮಾಡಿದ್ದು, ಇದು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಫೆ.24ರಂದು ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಾಗುವುದು" ಎಂದು ಹೇಳಿದರು.
"ವಾರದೊಳಗಾಗಿ ಅತಿವೃಷ್ಠಿ ಹಾನಿಗೆ ಎರಡನೇ ಕಂತಿನ ಹಣ ಬಿಡುಗಡೆಯಾಗಲಿದೆ" ಎಂದು ಮಾಹಿತಿ ನೀಡಿದರು.