ತಮಿಳುನಾಡು, ಫೆ.21 (DaijiworldNews/PY): ತಮಿಳುನಾಡು ಸರ್ಕಾರ, ವೈಗೈ, ಗುಂಡರ್ ಹಾಗೂ ಕಾವೇರಿ ನದಿಗಳನ್ನು ಜೋಡಿಸುವ 14,400 ಕೋಟಿ. ರೂ.ವೆಚ್ಚದ ಮಹತ್ವಾಕಾಂಕ್ಷೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರವಿವಾರ ಭೂಮಿಪೂಜೆ ನೆರವೇರಿಸಿತು.
ಕಾರ್ಯಕ್ರಮವು ಜಿಲ್ಲೆಯ ಕುಣತ್ತೂರು ಎಂಬಲ್ಲ ನಡೆದಿದ್ದು, ಸಿಎಂ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ ಅವರು ಭೂಮಿಪೂಜೆ ನೆರವೇರಿಸಿದರು.
6,941 ಕೋಟಿ ವೆಚ್ಚದ ಕಾಮಗಾರಿಗಳನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಒಟ್ಟು 262 ಕಿ.ಮೀ. ಉದ್ದದ ಕಾಲುವೆಯನ್ನು ಈ ಯೋಜನೆಯಡಿ ಅಭಿವೃದ್ದಿ ಪಡಿಸಲಾಗುತ್ತಿದೆ. ಇದರಲ್ಲಿ ಮೊದಲ ಹಂತದಲ್ಲಿ 118 ಕಿ.ಮೀ. ಉದ್ದದ ಕಾಲುವೆಯ ನಿರ್ಮಾಣ ಮಾಡಲಾಗುತ್ತದೆ. ಗುಂಡರ್ ನದಿಗೆ ಕವೇರಿ ನದಿಯಲ್ಲಿನ ಹೆಚ್ಚುವರಿ ನೀರನ್ನು ಕಾಲುವೆಯ ಮುಖೇನ ಹರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯಿಂದಾಗಿ ರಾಮನಾಥಪುರಂ ಸೇರಿದಂತೆ ಕರೂರು, ಪುದುಕೊಟ್ಟೈ, ತಿರುಚಿರಾಪಳ್ಳಿ, ವಿರುಧುನಗರ ಹಾಗೂ ಶಿವಗಂಗಾ ಜಿಲ್ಲೆಗಳಿಗೆ ಅನುಕೂಲವಾಗುವುದು. ಈ ಜಿಲ್ಲೆಗಳಲ್ಲಿರುವ ಸಾವಿರಕ್ಕಿಂತ ಹೆಚ್ಚಿನ ಕೆರೆಗಳ ಪುನಶ್ಚೇತನ ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.